ಹಾಸನ: ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ, ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು, ಶೀಘ್ರವೇ ಜಿಲ್ಲಾಮಟ್ಟದ ಮೆಗಾ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸೂಚಿಸಿದರು.
ನಗರದ ಹಿಮ್ಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಹೃದಯಘಾತ ಹೆಚ್ಚಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಚಿಕಿತ್ಸೆಗೆ ಯಾವೆಲ್ಲ ಉಪಕರಣ ಮತ್ತು ಎಷ್ಟು ಅನುದಾನ ಬೇಕು ಎಂಬುದರ ಬಗ್ಗೆ ವರದಿ ತಯಾರಿಸಿ ನಮಗೆ ನೀಡಿದರೆ ನಾವು ಸರ್ಕಾರದೊಂದಿಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಗರದಲ್ಲಿ ಸುಸಜ್ಜಿತ ಕಾಲೇಜು ಮತ್ತು ಆಸ್ಪತ್ರೆ ಇದೆ. ಜೊತೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಅನುದಾನದ ಕೊರತೆಯಿಂದ ಉದ್ಘಾಟನೆ ಆಗಿಲ್ಲ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಶೀಘ್ರ 25 ಕೋಟಿ ಅನುದಾನ ನೀಡಿದರೆ ಇಲ್ಲಿ ಜಯದೇವ ಆಸ್ಪತ್ರೆಯ ಒಂದು ಘಟಕ ತೆರೆಯಬಹುದು. ಇದರಿಂದ ಹೃದಯಘಾತದಿಂದ ಸಾವು ಕಡಿಮೆ ಮಾಡಬಹುದು ಎಂದರು.
ಸರಣಿ ಹೃದಯಾಘಾತ ಪ್ರಕರಣಗಳಿಂದ ಜಿಲ್ಲೆಯ ಜನ ಆತಂಕದಲ್ಲಿದ್ದು, ಇದನ್ನೇ ನೆಪ ಮಾಡಿಕೊಂಡು ಖಾಸಗಿ ಆಸ್ಪತ್ರೆಯವರು ಇಸಿಜಿ, ಎಕೋ ಮೊದಲಾದ ಪರೀಕ್ಷೆಗೆ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದ ಪ್ರತಿ ತಾಲೂಕು ಕೇಂದ್ರದಲ್ಲಿಯೂ ಹೃದಯ ತಪಾಸಣೆಗೆ ಯಂತ್ರೋಪಕರಣ ಬೇಕಿದೆ. ಈ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.

ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ತಕ್ಷಣ ಸರ್ಕಾರ ಭರ್ತಿ ಮಾಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮೆಡಿಕಲ್ ಕಾಲೇಜಿಗೆ ಏನೆಲ್ಲ ಅನುದಾನ ತರಬಹುದೆಂಬುದರ ಬಗ್ಗೆ ಪಟ್ಟಿ ಮಾಡಿಕೊಟ್ಟರೆ ಅದನ್ನ ತರಲು ಪ್ರಾಮಾಣಿಕ ಪ್ರಯತ್ನವನ್ನ ಶಾಸಕರಾದ ನಾವು ಮಾಡುತ್ತೇವೆ ಎಂದು ಹೇಳಿದರು.
ಖಾಸಗಿ ಆಸ್ಪತ್ರೆಗಳಿಗೆ ಕಳಿಸುವ ಸರ್ಕಾರಿ ವೈದ್ಯರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಹಿಮ್ಸ್ನಲ್ಲೂ ಎಲ್ಲರೂ ರೋಗಿಗಳ ಸಮಸ್ಯೆ ಆಲಿಸಿ ಸ್ಪಂದಿಸಬೇಕೆಂದರು.
ಅರಕಲಗೂಡು ಶಾಸಕ ಎ.ಮಂಜು ಮಾತನಾಡಿ, ಆರೋಗ್ಯ ಇಲಾಖೆಗೆ ಸಂಬಂಧ ಪಟ್ಟವರು ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೂ ತಂದರೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಆದರೆ ನಮ್ಮೊಂದಿಗೆ ಯಾರೂ ಕೂಡ ಸಂಪರ್ಕ ಇಲ್ಲ. ನೀವು ಹೋಗಿ ಪ್ರಸ್ತಾವನೆ ಸಲ್ಲಿಸಿದರೆ ಅದಕ್ಕೆ ಯಾರೂ ಬೆಲೆ ಕೊಡರು. ಮುಂದಿನ ದಿನಗಳಲ್ಲಿ ಇದನ್ನು ಬದಲಾವಣೆ ಮಾಡಿಕೊಳ್ಳಿ, ನಾವು ಸರ್ಕಾರದೊಂದಿಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಜಯದೇವ ಮಾದರಿಯಲ್ಲಿ ಜಿಲ್ಲೆಯಲ್ಲಿ ಕೂಡ ಒಂದು ಘಟಕ ತರಬೇಕು. ಹೃದಯ ತಪಾಸಣೆ ಸಂಬಂಧ ಕೆಲವು ಉಪಕರಣಗಳು ತಾಲೂಕು ಮಟ್ಟದಲ್ಲಿಯೂ ಇಲ್ಲ. ಅಂತಹ ಯಂತ್ರ ತರಿಸುವ ನಿಟ್ಟಿನಲ್ಲಿ ನಾವು ಮುಂದಾಗುತ್ತೇವೆ. ಅದರ ಅಂದಾಜು ಪಟ್ಟಿಯನ್ನು ತಯಾರಿಸಿ ವರದಿ ನೀಡಿ, ನಾವು ಸರ್ಕಾರದೊಂದಿಗೆ ಚರ್ಚಿಸುತ್ತೇವೆ. ರೇವಣ್ಣ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೂಡುವುದಾಗಿ ಭರವಸೆ ನೀಡಿದರು.
ಸ್ಥಳೀಯ ಶಾಸಕ ಎಚ್.ಪಿ ಸ್ವರೂಪ್ ಪ್ರಕಾಶ್ ಮಾತನಾಡಿ, ಕೆಲ ತಾಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು, ಅಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ರೋಗಿಗಳೊಂದಿಗೆ ಸರಿಯಾಗಿ ಸಿಬ್ಬಂದಿ ಸ್ಪಂದಿಸುವುದಿಲ್ಲ. ಈ ರೀತಿ ಆರೋಪ ಮತ್ತೆ ಬರದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಹೃದಯಾಘಾತ ಹೆಚ್ಚಳವಾಗಿಲ್ಲ: 2023-24 ಹಾಗೂ 2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ವರದಿಯಾದ ಹೃದ್ರೋಗ ಪ್ರಕರಣಗಳ ಕುರಿತು ಹಿಮ್ಸ್ ನಿರ್ದೇಶಕ ಬಿ.ರಾಜಣ್ಣ ಮಾತನಾಡಿ, ಕೆಲ ವರ್ಷಗಳಲ್ಲಿ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಏರಿಕೆಯಾಗಿಲ್ಲ ಕಳೆದ ಮೇ ತಿಂಗಳಿನಲ್ಲಿ 42 ಮಂದಿ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದರು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಜೂನ್ ತಿಂಗಳಿನಲ್ಲಿ 38 ಮಂದಿ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು ಇವರಲ್ಲಿ 11 ಮಂದಿಗೆ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ ಆದರೆ ಇತ್ತೀಚಿಗೆ ಮಾಧ್ಯಮಗಳಲ್ಲಿ ವರದಿಯಾದ ಹೃದಯಘಾತ ಪ್ರಕರಣಗಳಲ್ಲಿ ಆಸ್ಪತ್ರೆಗೆ ಬರುವ ಮುನ್ನವೇ ಸಾವು ಸಂಭವಿಸಿದೆ ಎಂದು ಮಾಹಿತಿ ನೀಡಿದರು. ಎಲ್ಲಾ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ ನಮ್ಮಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತ ಪ್ರಕರಣಗಳು ಏರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ, ಡಿಹೆಚ್ಒ ಡಾ. ಅನಿಲ್ ಕುಮಾರ್ ಇತರರಿದ್ದರು.

[…] […]