ಹಾಸನ: ಮಾ.8 ರಂದು ನಡೆದ ಶಂಖ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ. ಒಟ್ಟು 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು 7 ಸ್ಥಾನಗಳಲ್ಲಿ ಜಯಗಳಿಸಿ ಸಂಘದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ.
ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಭಾನುವಾರ ಬೆಳಗ್ಗೆ ಹಾಸನದಲ್ಲಿ ಶಾಸಕರ ನಿವಾಸದಲ್ಲಿ ವಿಜೇತರನ್ನು ಹಾಸನ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಹಿಳೆಯರು ಸಹಕಾರ ಸಂಘಗಳ ಮೂಲಕ ಆರ್ಥಿಕವಾಗಿ ಸಬಲರಾಗುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು. ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳು ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಪ್ರಮುಖ ಪಾತ್ರವಹಿಸುತ್ತಿದ್ದು, ಈ ರೀತಿಯ ಸಂಸ್ಥೆಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವುದು ಗ್ರಾಮಾಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಸದಸ್ಯರು ಸಂಘವನ್ನು ಉತ್ತಮವಾಗಿ ನಡೆಸಿ ರೈತರು ಹಾಗೂ ಹಾಲು ಉತ್ಪಾದಕರ ಹಿತ ಕಾಪಾಡಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ವಿಜೇತ ಅಭ್ಯರ್ಥಿಗಳು ಶಾಸಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಜೊತೆಗೆ ಸಂಘದ ಅಭಿವೃದ್ಧಿಗೆ ಹಾಗೂ ಸದಸ್ಯರ ಹಿತಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
