ಹಾಸನ: ನಗರ ಹಾಗೂ ಜಿಲ್ಲೆಯ ಎಲ್ಲಾ ಬ್ಯಾಂಕ್ಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಪಾಲನೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಕುವೆಂಪು ನಗರದಲ್ಲಿರುವ ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಸಿ.ಡಿ.ಮನುಕುಮಾರ್, ಜಿಲ್ಲೆಯ ಕೆಲವು ಬ್ಯಾಂಕ್ಗಳು ಕನ್ನಡ ಭಾಷೆ ಬಳಕೆ ಮಾಡದೆ ಆರ್ಬಿಐ ಆದೇಶ ಉಲ್ಲಂಘಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಆರ್ಬಿಐ ಮಾರ್ಗದರ್ಶಿ ಸೂತ್ರಗಳ ಅನ್ವಯ ಬ್ಯಾಂಕುಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದರು.
ಆದರೆ ಕೆಲವು ಬ್ಯಾಂಕ್ಗಳವರು ಆರ್ಬಿಐ ಸೂಚನೆಗಳನ್ನು ಪಾಲಿಸದೆ ಉದ್ಧಟತನ ಮೆರೆಯುತ್ತಿವೆ. ಈ ನಿಯಮದ ಪ್ರಕಾರ ಸಿಬ್ಬಂದಿ 3 ತಿಂಗಳಗೊಳಗೆ ಸ್ಥಳೀಯ ಕನ್ನಡ ಭಾಷೆ ಕಲಿಯಬೇಕು. ಆದರೆ ಜಿಲ್ಲೆಯಲ್ಲಿ ಪಾಲನೆ ಆಗುತ್ತಿಲ್ಲ ಎಂದು ದೂರಿದರು.
ಬ್ಯಾಂಕಿನ ಸೂಚನಾ ಫಲಕಗಳು, ಬ್ಯಾಂಕ್ ಚಲನ್ಗಳು ಸೇರಿದಂತೆ ಎಲ್ಲ ರಶೀದಿಗಳು ಕನ್ನಡ ಭಾಷೆಯಲ್ಲಿ ಮುದ್ರಿತವಾಗಿರುವಂತೆ ನೋಡಿಕೊಳ್ಳಬೇಕು. ಹೊರ ರಾಜ್ಯದ ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರ ಜೊತೆ ತೆಲುಗು, ಹಿಂದೆ ಬಳಕೆ ಮಾಡುತ್ತಿದ್ದಾರೆ. ಇದರಿಂದ ರೈತರು ಮತ್ತು ಸ್ಥಳೀಯರಿಗೆ ತೊಂದರೆ ಆಗುತ್ತಿದೆ. ಸ್ಥಳೀಯ ಭಾಷೆಯ ಮೂಲಕ ರೈತರು, ಮಹಿಳೆಯರು, ಹಿರಿಯ ನಾಗರಿಕರು, ಅನಕ್ಷರಸ್ಥರು ಮನವಿ ಅರಿತುಕೊಂಡು ಅವರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕೆಂದು ನಿಯಮಾವಳಿಗಳು ಹೇಳುತ್ತಿದ್ದರೂ ಯಾರೊಬ್ಬರೂ ಇದನ್ನು ಪಾಲನೆ ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.
ಜಿಲ್ಲೆಯಲ್ಲಿರುವ ಎಲ್ಲ ಬ್ಯಾಂಕ್ಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸಬೇಕು. ಬ್ಯಾಂಕ್ನ ಸಿಬ್ಬಂದಿಗಳು ಗ್ರಾಹಕರೊಂದಿಗೆ ಕನ್ನಡ ಭಾಷೆಯಲ್ಲೇ ವ್ಯವಹರಿಸಲು ಮುಂದಾಗಬೇಕು. ಬ್ಯಾಂಕ್ಗಳ ಸಿಬ್ಬಂದಿ ತಮ್ಮ ದುರ್ವರ್ತನೆ ತಿದ್ದುಕೊಳ್ಳದೇ ಇದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಈಗಾಗಲೇ ದ್ವಿಭಾಷಾ ನೀತಿ ಜಾರಿಗೆ ರಾಜ್ಯದಲ್ಲಿ ಹೋರಾಟ ತೀವ್ರಗೊಂಡಿದೆ. ಹೀಗಾಗಿ ಹಿಂದಿಯನ್ನು ಬಲವಂತವಾಗಿ ಹೇರಿಕೆ ಮಾಡಬಾರದು. ಹಾಗೆಯೇ ನಾಮಫಲಕ ಶೇ.60 ರಷ್ಟು ಇರಬೇಕು ಎಂದು ರಾಜ್ಯ ಸರ್ಕಾರವೇ ಆದೇಶ ಮಾಡಿದೆ. ಇದನ್ನು ಪಾಲನೆ ಮಾಡುವ ಸಂಬಂಧ ಒಂದು ವಾರ ಗಡುವು ನೀಡಲಾಗುವುದು. ಇದಕ್ಕೆ ಎಲ್ಲ ಬ್ಯಾಂಕ್ಗಳವರು ಸ್ಪಂದಿಸದೇ ಇದ್ದರೆ, ನಾವೇ ನಾಮಫಲಕ ಬದಲು ಮಾಡುವ ಹೋರಾಟಕ್ಕೆ ಧುಮುಕುವುದಾಗಿ ಎಚ್ಚರಿಸಿದರು.
ನಂತರ ಲೀಡ್ಬ್ಯಾಂಕ್ ಅಧಿಕಾರಿ ಕಿಶೋರ್ ಕುಮಾರ್ಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಗರಾಧ್ಯಕ್ಷ ಶಿವಕುಮಾರ್, ಯುವ ಘಟಕದ ಅಧ್ಯಕ್ಷ ಪ್ರೀತಂರಾಜ್, ಉಪಾಧ್ಯಕ್ಷ ಬೋರೇಗೌಡ, ಅಭಿಗೌಡ, ಆಲ್ವಿನ್, ಶಶಾಂಕ್, ಶ್ರೀಶಾಂತ್, ವಿನೋದ್, ಪ್ರಕಾಶ್ ಮೊದಲಾದವರಿದ್ದರು.
