
ಹಾಸನ- ಶರಣರು ಅಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಸಮಾನತೆಯ ಸಂದೇಶವನ್ನು ಸಾರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕೆ. ಟಿ ಶಾಂತಲಾ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿಂದು ಏರ್ಪಡಿಸಲಾಗಿದ್ದ ಕಾಯಕ ಶರಣ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಅವರು ಅಂದು ಮಾಡಿದ ಕೆಲಸಗಳು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.
ಸರಳ ಜೀವನ, ಶುದ್ಧ ಧ್ಯಾನ, ನಿಷ್ಕಲ್ಮಶ ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯವೆಂದು ಸಾರಿದ ಕಾಯಕ ಶರಣರ ವಚನಗಳು ಇಂದಿಗೂ ಹೆಸರುವಾಸಿಯಾಗಿವೆ. ಶರಣು ಚಿಂತನೆ ಬಸವಣ್ಣ ಅವರು ಅನುಭವ ಮಂಟಪಕ್ಕೆ ದೇಶದ ಎಲ್ಲೆಡೆಯಿಂದ ಬಂದು ಸೇರಿಕೊಂಡು ಕಲ್ಯಾಣದಲ್ಲಿ ತಮ್ಮ ವಚನಗಳ ಮೂಲಕ ಸಾರಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್ ಅವರು ಮಾತನಾಡಿ ಮಹಾನ್ ಪುರುಷರ ಜಯಂತಿಗಳು ಆಚರಣೆಯನ್ನು ಒಂದು ಸಮುದಾಯದವರು ಆಚರಣೆಗೆ ಸೀಮಿತವಾಗಬಾರದು. ಮಹಾನ್ ವ್ಯಕ್ತಿಗಳ ಜಯಂತಿಗಳ ಆಚರಿಸುವುದು ಅವರ ವ್ಯಕ್ತಿತ್ತವನ್ನು ಎಲ್ಲಾರೂ ತಿಳಿಯಬೇಕು, ಜಾತಿ ವ್ಯವಸ್ಥೆಯನ್ನು ತಡೆಯಲು ಶರಣರು ೧೨ ನೇ ಶತಮಾನದಲ್ಲಿ ಸಮಾನತೆಯನ್ನು ತಿಳಿಸಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶರಣರ ಕುರಿತು ವಿಶೇಷ ಉಪನ್ಯಾಸ ನೀಡಲು ಆಗಮಿಸಿದ್ದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮಂಜಯ್ಯ ಡಿ.ಕೆ ಅವರು ಮಾತನಾಡಿ ೧೨ನೇ ಶತಮಾನವು ಇವತ್ತಿನ ನಮ್ಮ ಸಂವಿಧಾನದ ಪಾರ್ಲಿಮೆಂಟ್ ಮಾದರಿಯಲ್ಲಿ ಅಂದಿನ ಅನುಭವ ಮಂಟಪ ಇತ್ತು. ಯಾರನ್ನೂ ಕೀಳಾಗಿ ಕಾಣಬಾರದು ಎಂಬುವುದು ಬಸವೇಶ್ವರರ ಸಮಾನತೆಯ ತತ್ವವಾಗಿದೆ. ಸವಣ್ಣ ಅವರ ಹಾದಿಯಲ್ಲಿ ನಡೆದ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಶರಣ ಪಡೆಯ ಮಹನೀಯರಾಗಿದ್ದಾರೆ ಎಂದು ಹೇಳಿದರು.
ಶರಣ ವಚನಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕವಾಗಿವೆ. ಯುವ ಪೀಳಿಗೆ ಅವರ ಆದರ್ಶಗಳನ್ನು ಪಾಲಿಸಿ ಮುನ್ನಡೆಯಬೇಕಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಸಹ ಸಮಾನತೆಯಿಂದ ಕಾಣಬೇಕು ಎಂಬುದು ೧೨ನೇ ಶತಮಾನದ ಶರಣರ ಚಿಂತನೆಯಾಗಿತ್ತು. ಶರಣರು ಮಾನವೀಯ ಮೌಲ್ಯಗಳು ಹೊಂದಿದರು, ಕಾಯಕವನ್ನು ಸಮ ತುಕದಿಂದ ಅನುಭವಿಸಬೇಕು ಎಂಬುದನ್ನು ತಮ್ಮ ವಚನಗಳ ಮೂಲಕ ಸಾರಿದ್ದಾರೆ. ಮಾದರ ಚನ್ನಯ್ಯ ಅವರು ಮೂಲತಃ ತಮಿಳು ಕಾರಿಕಾಲ ಚೋಳನ ಆಸ್ಥಾನದಲ್ಲಿದ್ದರು. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾತ್ರ ಒಲಿಸಿಕೊಳ್ಳಬಹುದು.. ನುಡಿ ನಡೆ ಶುದ್ಧವಾಗಿರಬೇಕು ಎಂದು ತಿಳಿಸಿದ್ದಾರೆ ಎಂದರು.
ಇದೇ ವೇಳೆ ಅಪರ ಜಿಲ್ಲಾಧಿಕಾರಿ ಕೆ. ಟಿ ಶಾಂತಲಾ ಅವರು ಶಾಂತಿಗ್ರಾಮ ಕೆ. ಪಿ.ಎಸ್ ಶಾಲೆಯ ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ತಾರಾನಾಥ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾದ ಈ ಕೃಷ್ಣೇಗೌಡ, ಭೀಮ ವಿಜಯ ಪತ್ರಿಕೆಯ ಸಂಪಾದಕರಾದ ನಾಗರಾಜ್ ಹೆತ್ತೂರು ಅವರು ಉಪಸ್ಥಿತರಿದ್ದರು.