ಹಾಸನ – ನಗರದ ಬಿ. ಕಾಟೆಹಳ್ಳಿ ಭಾಗದ ಶಿಕ್ಷಕರ ಕಾಲೋನಿ ಮೊದಲ ಹಂತದ ಮೈನ್ ರಸ್ತೆಯಲ್ಲಿರುವ ನಟರಾಜ್ ಅವರ ಮನೆ ಹಾಗೂ ಮನೆಗೆ ಹೊಂದಿಕೊಂಡಿರುವ ಅಂಗಡಿಯಲ್ಲಿ ತಡರಾತ್ರಿ ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ.
ಮನೆಯ ಮಾಲೀಕ ನಟರಾಜ್ ಅವರು ಕಳೆದ ಎರಡು ದಿನಗಳಿಂದ ಮನೆಯಲ್ಲಿ ಇರಲಿಲ್ಲ. ಈ ಅವಕಾಶವನ್ನು ಬಳಸಿಕೊಂಡು ಹರಿತ ಕಳ್ಳರು ಕೈಚಳಕ ತೋರಿಸಿ ಮನೆ ಮತ್ತು ಅಂಗಡಿಗೆ ನುಗ್ಗಿ ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ.
ಇಂದು ಮನೆಗೆ ಮರಳಿದ ವೇಳೆ ಮನೆ ಮತ್ತು ಅಂಗಡಿಯಲ್ಲಿ ಸಾಮಾನುಗಳು ಚದುರಿರುವುದನ್ನು ಗಮನಿಸಿದ ನಟರಾಜ್ ಅವರು ಕಳ್ಳತನವಾಗಿರುವುದನ್ನು ಅರಿತು ತಕ್ಷಣವೇ ಬಡಾವಣೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಕಳ್ಳತನದಲ್ಲಿ ಅಪಾರ ನಷ್ಟ ಸಂಭವಿಸಿರುವುದಾಗಿ ಮನೆಯ ಮಾಲೀಕರು ತಿಳಿಸಿದ್ದಾರೆ. ಕಳ್ಳರು ಎಷ್ಟು ಮೊತ್ತದ ವಸ್ತುಗಳು ಮತ್ತು ನಗದು ಕದ್ದೊಯ್ದಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
