ಹಾಸನ- ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮುಖ್ಯಮಂತ್ರಿ ಮನೆಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿರುವುದರ ಹಿಂದೆ ಯಾವುದೇ ವಿಶೇಷತೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಪ್ರಸಾದ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು, ಅವರು ನಮ್ಮ ಮನೆಗೆ ಬರ್ತಾರೆ, ನಾನು ಪರಮೇಶ್ವರ್ ಮನೆಗೆ ಹೋಗ್ತಿನಿ, ಅದಕ್ಕೆ ರಾಜಕೀಯ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದರು.
ಹರಿಪ್ರಸಾದ್ ಅವರೂ ಬೇಕಾ ದವರು ಅದಕ್ಕೆ ಹೋಗಿರಬಹುದು ಅಷ್ಟೇ, ರಾಜಕೀಯದಲ್ಲಿ ಶತ್ರುಗಳೂ ಯಾರಿಲ್ಲ, ಮಿತ್ರರೂ ಯಾರು ಇರಲ್ಲ ಅನ್ನುವ ಹಾಗೇ ಇಂದಿನ ಭೇಟಿಯೂ ಅಷ್ಟೆ ಎಂದರು. ರಾಜಕಾರಣ ಯಾವಾಗಲೂ ಒಂದೇ ತರ ಇರಲ್ಲ, ಬದಲಾವಣೆ ಆಗುತ್ತಲೇ ಇರುತ್ತೆ ಎಂದ ಅವರು, ನಾನು ಮಂತ್ರಿ ಅಷ್ಟೇ, ಈ ಪ್ರಶ್ನೆನಾ ನಮ್ಮ ಹತ್ರ ಕೇಳಬಾರದು ಬೆಂಗಳೂರಿನಲ್ಲಿ ಕೇಳಬೇಕು, ನಿಮಗೆ ಅಲ್ಲಿ ಉತ್ತರ ಸಿಗಲಿದೆ ಎಂದರು.
ನಾನೇನು ಹೇಳಲ್ಲ: ಕನ್ನಡ ಭಾಷೆ ಬಗ್ಗೆ ಬಹುಭಾಷ ನಟ ಕಮಲಹಾಸನ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಈಗಾಗಲೇ ಬಹಳಷ್ಟು ಜನ ಹೇಳಿಕೆ ಕೊಟ್ಟಿದ್ದಾರೆ. ಅವರು ಅದಕ್ಕೆ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದಾರೆ, ಅದರ ಬಗ್ಗೆ ನಾನು ಏನೂ ಹೇಳಲು ಆಗಲ್ಲ ಎಂದಷ್ಟೇ ಉತ್ತರಿಸಿದರು.
