ಹಾಸನ: ಮನುಷ್ಯರು ಸದಾ ಜೇನು ಹುಳುವಿನಂತೆ ಚೈತನ್ಯರಾಗಿರಬೇಕು ಎಂದು ಹಾಸನ ಆಕಾಶವಾಣಿ ಕೃಷಿ ವಿಭಾಗದ ಮುಖ್ಯಸ್ಥ ಡಾ. ವಿಜಯ್ ಅಂಗಡಿ ತಿಳಿಸಿದರು.
ಹಾಸನ ಆಕಾಶವಾಣಿ ಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಇವರನ್ನು ಹಾಸನ ಆಕಾಶವಾಣಿ, ಸಂಘ ಸಂಸ್ಥೆಗಳು ಮತ್ತು ಹಿತೈಷಿಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಅವರು, ಒಂದು ಜೇನುಹುಳು ಪ್ರತಿದಿನ ಸುಮಾರು 5000 ಕಿ.ಮೀ. ದೂರದಷ್ಟು ಕ್ರಮಿಸಿದರೂ ಆರೋಗ್ಯದಿಂದ ಚೈತನ್ಯವಾಗಿರುತ್ತದೆ. ಇಂತಹ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಂಡರೆ ಸದಾ ಹುರುಪಾಗಿರಬಹುದು.
ನಮ್ಮ ಆಕಾಶವಾಣಿ ಕೇಂದ್ರದಲ್ಲಿ ಗ್ರಾಮೀಣ ಪ್ರದೇಶಗಳಿಗೆ ಅಚ್ಚುಮೆಚ್ಚಿನ ಕಾರ್ಯಕ್ರಮಗಳಾದ ಹಳ್ಳಿಧ್ವನಿ ಮತ್ತು ಸೊಬಗಿನ ಶಾಲೆ ಕಾರ್ಯಕ್ರಮ ಅತ್ಯಂತ ವಿಶೇಷತೆ ಪಡೆಯಿತು. ಒಂದು ಗ್ರಾಮದ ಪುರಾತನ ಕಾಲದ ಇತಿಹಾಸದೊಂದಿಗೆ ತೆರೆದುಕೊಳ್ಳುವ ಈ ಕಾರ್ಯಕ್ರಮ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕಣ್ತೆರೆಯಿತು.
ಇದಲ್ಲದೆ ಹಾಸನ-ಶಾಸನ, ಹಿರಿಯ ಜೀವಗಳ ಭಾವ, ದೇಗುಲ ದರ್ಶನ, ಸೈಬರ್ ಕ್ರೈಮ್ ಜಾಗೃತಿ, ಜೀವನಧ್ವನಿ, ದಂತಧ್ವನಿ, ಕಾಫಿ ಸಮಯ ಸೇರಿದಂತೆ ಹತ್ತಾರು ಕಾರ್ಯಕ್ರಮಗಳು ಕೇಳುಗರ ಧ್ವನಿಯಾಗಿವೆ. ಇತ್ತೀಚಿಗೆ ದೃಶ್ಯ ಮಾಧ್ಯಮದ ಹಾವಳಿಯಿದ್ದರೂ ಆಕಾಶವಾಣಿ ಕೇಳುಗರು ಹೆಚ್ಚುತ್ತಿದ್ದಾರೆ. ಇದಕ್ಕೆ ಆಕಾಶವಾಣಿ ಪ್ರಸಾರ ಮಾಡುವ ವೈವಿದ್ಯಮಯ ಕಾರ್ಯಕ್ರಮಗಳು ಸಾಕ್ಷಿಯಾಗಿವೆ.
ನನ್ನ ಸೇವಾವಧಿಯಲ್ಲಿ ಕನಿಷ್ಠ 2 ವರ್ಷಗಳ ದಿನದಷ್ಟು ಕಾಲ ರಜೆ ಪಡೆಯದೆ ಸಂಸ್ಥೆ ಅಭಿವೃದ್ಧಿ ಮತ್ತು ಕೇಳುಗರ ಸೇತುವೆಯಾಗಿ ಕೆಲಸ ನಿರ್ವಹಿಸಿದ್ದು ನನಗೆ ತೃಪ್ತ ತಂದಿದೆ ಎಂದರು.
ಆಕಾಶವಾಣಿ ಮುಖ್ಯಸ್ಥ ಶ್ರೀಧರ್ ಮಾತನಾಡಿ, ಡಾ. ವಿಜಯ್ ಅಂಗಡಿಯವರು ತಮ್ಮ ವರ್ಣಮಯ ವ್ಯಕ್ತಿತ್ವ ಹಾಗೂ ಅರ್ಥಪೂರ್ಣವಾದ ಬದುಕಿನೊಂದಿಗೆ, ತಮ್ಮ ಸೇವಾವಧಿಯಲ್ಲಿ ಆಕಾಶವಾಣಿಯಲ್ಲಿ ಹಲವು ವಿನೂತನ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಕೇಳುಗರಿಗೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಿದರು ಎಂದರು.
ಅರಕಲಗೂಡು ವಿ. ಮಧುಸೂಧನ್, ಜಿ.ಆರ್.ರವಿಶಂಕರ್, ಸುಜಾತ ಎಫ್. ತಳವಾರ್, ಜಿ.ಡಿ.ರಮೇಶ್, ಚೈತ್ರಾವತಿ, ನಾಜಿಮ, ಆರ್.ವಿ.ಲೋಕೇಶ್, ಜಿ.ಎಸ್.ಗಿಡ್ಡೇಗೌಡ, ಇರ್ಷಾದ್, ರುದ್ರಪ್ಪ, ಷಣ್ಮುಖ, ಡಾ. ಮಂಜುನಾಥ್, ಎನ್. ಎಂ. ಚಂದ್ರಶೇಖರ್ಮ ಅಪೂರ್ವ ಅಂಗಡಿ, ಅಮೂಲ್ಯ ಅಂಗಡಿ ಹಾಜರಿದ್ದರು.
