ಇತ್ತೀಚೆಗೆ ಅತ್ಯಾಚಾರ ಆರೋಪದಡಿ ಬಂಧಿತನಾಗಿರುವ ಮಡೆನೂರು ಮನು, ಕನ್ನಡದ ಹಿರಿಯ ನಟ ಡಾ. ಶಿವರಾಜ ಕುಮಾರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ, ಕೂಡಲೇ ಆತನ ಮೇಲೆ ಕೇಸು ದಾಖಲಿಸಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ, ಅಖಿಲ ಕರ್ನಾಟಕ ಡಾ. ರಾಜಕುಮಾರ್, ಡಾ. ಶಿವರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ಅಭಿಮಾನಿ ಸಂಘಗಳಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.
ಈ ವೇಳೆ ಮಾತನಾಡಿದ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಸ್.ರತೀಶ್ ಕುಮಾರ್, ಡಾ.ರಾಜ ಕುಮಾರ್ ಅವರ ಸುಪತ್ರರಾಗಿರುವ ಶಿವರಾಜ ಕುಮಾರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮನು ಮಾತನಾಡಿರುವುದು ಖಂಡನೀಯ. ಆತ ಅಮಲಿನಲ್ಲಿ ಮಾತನಾಡಿದ್ದಾನೆ. ಕಾಮಿಡಿ ಕಿಲಾಡಿಗಳು ಶೋ ನಲ್ಲಿ ಭಾಗಿಯಾಗಿ ಒಂದೆರಡು ಚಿತ್ರಗಳಲ್ಲಿ ನಟಿಸಿದಾಕ್ಷಣ ಆತ ತಾನೇ ದೊಡ್ಡ ಹೀರೋ ಎಂದುಕೊಂಡಿದ್ದಾನೆ.
ಡಾ.ರಾಜಕುಮಾರ್ ಕುಟುಂಬದ ಮೇಲೆ ಇದುವರೆಗೂ ಯಾರೊಬ್ಬರೂ ಈ ರೀತಿಯ ಹೇಳಿಕೆ ನೀಡಿಲ್ಲ. ಕಲಾ ಲೋಕದಲ್ಲಿ ಇನ್ನೂ ಕಣ್ಣು ಬಿಡುತ್ತಿರುವ ಮನು ನಾಲಗೆ ಹರಿಯ ಬಿಟ್ಟಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಆತನನ್ನು ಈ ಪ್ರಕರಣದಲ್ಲೂ ಬಂಧಿಸಬೇಕು. ಅಲ್ಲದೆ ಅವನು ಕನ್ನಡಿಗರು ಹಾಗೂ ಶಿವರಾಜ್ಕುಮಾರ್ ಅವರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಉಪಾಧ್ಯಕ್ಷ ಜಕ್ಕನಹಳ್ಳಿ ಮೋಹನ್ ಕುಮಾರ ಮಾತನಾಡಿ, ಡಾ.ರಾಜಕುಮಾರ್ ಮತ್ತವರ ಕುಟುಂಬದವರು ಕನ್ನಡಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಕಲಾಸೇವೆ ಅಮರವಾದುದು, ಅವರ ಸಿನಿಮಾಗಳನ್ನು ನೋಡಿ ನಾವೆಲ್ಲ ಸಾಕಷ್ಟು ಕಲಿಸಿದ್ದೇವೆ. ಅಂಥ ಕುಟುಂಬದವರ ಬಗ್ಗೆ ಲಘುವಾಗಿ ಮಾತನಾಡಿರುವುದು ಖಂಡನೀಯ. ಕೂಡಲೇ ಮನು ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಅಭಿಮಾನಿ ಸಂಘದ ಮಹಿಳಾ ಘಟಕದ ಅಧ್ಯಕ್ಷ ವಿಜಯಲಕ್ಷ್ಮಿ ಅಂಜನಪ್ಪ ಮಾತನಾಡಿ, ನಮ್ಮ ನಾಯಕ ನಟ ಶಿವಣ್ಣ ಅವರ ಆಯಸ್ಸು ಹೇಳುವುದಕ್ಕೆ ಮಡೆನೂರು ಮನು ಯಾರು ಎಂದು ಏಕ ವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು. ಈತ ಇನ್ನೂ ಸಣ್ಣ ಕಲಾವಿದ. ಈಗಾಗಲೇ ಹಾಸನದ ಮರ್ಯಾದೆ ತೆಗೆದಿರುವ ಈತನಿಗೆ ನಾಚಿಗೆ ಆಗಬೇಕು. ಈತನನ್ನು ಹೀಗೆಯೇ ಬಿಡಬಾರದು. ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ವಿವಿಧ ಅಭಿಮಾನಿಗಳ ಸಂಘದ ಭಾಗ್ಯ, ಶೋಭಾ ಶಂಕರ್, ಹೆಚ್.ಎಂ. ಶಂಕರ್, ಜನಾರ್ಧನ್, ವಿಜಯಣ್ಣ, ಸಾಲಗಾಮೆ ರಾಜಣ್ಣ, ಜಕ್ಕನಹಳ್ಳಿ ಕುಮಾರ್, ಶರತ್, ರಮೇಶ್, ಪ್ರವೀಣ್, ಭಾನುಪ್ರಕಾಶ್, ವಿನುತಾ ಕುಮಾರ್, ರವಿಕುಮಾರ್, ರೇವಣ್ಣ ಮೊದಲಾದವರಿದ್ದರು.
