ಹಾಸನ, ಏ.4: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ರಾಜ್ಯದ ಸುಮಾರು 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕುತಂತ್ರ ನಡೆಯುತ್ತಿದೆ ಎಂದು ಆರೋಪಿಸಿ, ಇದರ ವಿರುದ್ಧ ಏಪ್ರಿಲ್ 10, 2026ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಬೃಹತ್ ಜನಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಎಐಡಿಎಸ್ಓ ಜಿಲ್ಲಾ ಅಧ್ಯಕ್ಷೆ ಚೈತ್ರಾ ತಿಳಿಸಿದರು.
ಹಾಸನ ನಗರದ ಹೇಮಾವತಿ ಪ್ರತಿಮೆ ಮುಂಭಾಗ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ನಡೆಯಲಿರುವ ರಾಜ್ಯಮಟ್ಟದ ಜನಸಮಾವೇಶದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ತಿಂಗಳಿನಿಂದ ಈ ಯೋಜನೆ ವಿರುದ್ಧ ರಾಜ್ಯದಾದ್ಯಂತ ಜನ ಹೋರಾಟ ನಡೆಯುತ್ತಿದೆ ಎಂದರು.
ಎಐಡಿಎಸ್ಓ ನೇತೃತ್ವದಲ್ಲಿ ಹಳ್ಳಿ-ಹಳ್ಳಿಗಳಲ್ಲಿ ಪೋಷಕರು, ಗ್ರಾಮಸ್ಥರು ಹಾಗೂ ಶಿಕ್ಷಣಾಭಿಮಾನಿಗಳು “ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿಗಳು” ರಚಿಸಿಕೊಂಡು, “ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ” ಎಂಬ ಘೋಷಣೆಯೊಂದಿಗೆ ಹೋರಾಟ ತೀವ್ರಗೊಳಿಸಿದ್ದಾರೆ ಎಂದು ಹೇಳಿದರು.
ನಾಡಿನ ಹೆಸರಾಂತ ಸಾಹಿತಿಗಳು, ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಪ್ರೇಮಿಗಳು, ಬಡ ಮಕ್ಕಳನ್ನು ಶಿಕ್ಷಣದಿಂದ ಶಾಶ್ವತವಾಗಿ ದೂರ ತಳ್ಳುವ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ ಎಂದು ಅವರು ಹೇಳಿದರು.
“ಜನವಿರೋಧಿ ನಿರ್ಧಾರ ಮುಂದುವರಿಸುತ್ತಿದೆ ಸರ್ಕಾರ”
ಮುಂದುವರಿದು ಮಾತನಾಡಿದ ಚೈತ್ರಾ, ನಾಡಿನ ಜನತೆಯ ತೀವ್ರ ವಿರೋಧದ ನಡುವೆಯೂ ಸರ್ಕಾರ ಶಾಲೆಗಳನ್ನು ವಿಲೀನಗೊಳಿಸುವ ಕಾರ್ಯವನ್ನು ಮುಂದುವರಿಸಿದೆ ಎಂದು ಆರೋಪಿಸಿದರು.
“ಯಾವ ಶಾಲೆಗಳನ್ನು ವಿಲೀನಗೊಳಿಸಬೇಕು ಎಂಬುದರ ಕುರಿತು ಈಗಾಗಲೇ ಮ್ಯಾಪಿಂಗ್ ನಡೆದಿದೆ. ಅಧಿಕಾರಿಗಳಿಂದ ಮ್ಯಾಗ್ನೆಟ್ ಶಾಲೆಗಳ ಸಮೀಕ್ಷೆ ನಡೆಸಲಾಗುತ್ತಿದೆ. ವಿಲೀನಗೊಳ್ಳುವ ಶಾಲೆಗಳ ಮುಖ್ಯಶಿಕ್ಷಕರಿಗೆ ಮೌಖಿಕ ಆದೇಶ ನೀಡಲಾಗಿದೆ. ಏಪ್ರಿಲ್ 8 ಮತ್ತು 9ರಂದು ನಡೆಯಲಿರುವ ಪೋಷಕರ ಸಭೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮಕ್ಕಳನ್ನು ಕೆಪಿಎಸ್ ಶಾಲೆಗಳಿಗೆ ಕಳುಹಿಸುವಂತೆ ಒತ್ತಾಯಿಸಲು ಶಾಲೆಗಳಿಗೆ ನೋಟಿಸ್ ನೀಡಲಾಗಿದೆ” ಎಂದು ಆರೋಪಿಸಿದರು.
ಇದಲ್ಲದೆ, ಏಪ್ರಿಲ್ 1ರಂದು ಜಿಲ್ಲೆಯ ಡಿಡಿಪಿಐ ಹಾಗೂ ಬಿಇಓಗಳ ಸಭೆ ನಡೆಸಿ ಶಾಲೆ ಮುಚ್ಚುವ ಪ್ರಕ್ರಿಯೆಗೆ ವೇಗ ನೀಡಲು ಸರ್ಕಾರ ಕುತಂತ್ರ ನಡೆಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಸಮಾವೇಶ
ಸರ್ಕಾರದ ಈ ಜನವಿರೋಧಿ ಹಾಗೂ ನಿರಂಕುಶ ನಡೆಯ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಎಐಡಿಎಸ್ಓ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಏಪ್ರಿಲ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಜನಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ ಹಳ್ಳಿ-ಹಳ್ಳಿಗಳಿಂದ ಪೋಷಕರು ಹಾಗೂ ವಿದ್ಯಾರ್ಥಿಗಳು “ನಮ್ಮೂರ ಶಾಲೆ ಉಳಿಯಲಿ” ಎಂಬ ಘೋಷಣೆಗಳೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸಲು ಸಿದ್ಧತೆ ನಡೆಸಿದ್ದಾರೆ ಎಂದರು.
ಹೆಸರಾಂತ ಸಾಹಿತಿಗಳು, ಹೋರಾಟಗಾರರ ಭಾಗಿ
ಈ ಜನಸಮಾವೇಶದಲ್ಲಿ ನಾಡಿನ ಹಿರಿಯ ಸಾಹಿತಿಗಳು, ಶಿಕ್ಷಣ ತಜ್ಞರು, ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಡಾ. ಹಂಪ ನಾಗರಾಜಯ್ಯ, ಡಾ. ಕೆ. ಮರುಳಸಿದ್ದಪ್ಪ, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಡಾ. ಅಲ್ಲಮಪ್ರಭು ಬೆಟ್ಟದೂರು, ಪ್ರೊ. ಎ. ಮುರಿಗೆಪ್ಪ, ರಾಘವೇಂದ್ರ ಕುಷ್ಟಗಿ, ಹೇಮಲತಾ ಮಹಿಷಿ, ನಿರಂಜನರಾಧ್ಯ ವಿ.ಪಿ., ಗುರುಪ್ರಸಾದ್ ಕೆರೆಗೋಡು, ಮಾವಳ್ಳಿ ಶಂಕರ್, ಪ್ರೊ. ಸಬಿಹಾ ಭೂಮಿಗೌಡ, ಬಡಗಲಪುರ ನಾಗೇಂದ್ರ, ಉಗ್ರ ನರಸಿಂಹೇಗೌಡ, ಅಜಯ್ ಕಾಮತ್, ವಿ.ಎನ್. ರಾಜಶೇಖರ್, ಶಶಿಧರ್ ಎಂ., ಸೋಮಶೇಖರ ಕೆ., ಶೋಭಾ ಎಸ್., ಸಿದ್ಧಲಿಂಗ ಬಾಗೇವಾಡಿ, ಅಶ್ವಿನಿ ಕೆ.ಎಸ್. ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಸುಷ್ಮಾ, ವಿದ್ಯಾರ್ಥಿನಿಯರಾದ ಸ್ಪೂರ್ತಿ, ವರ್ಷ, ಅಕ್ಷತಾ, ಅಂಕಿತ, ಪೂಜಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
