ಹಾಸನ – ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಅಲ್ಪಸಂಖ್ಯಾತ ಮುಸ್ಲಿಂ ಸಮಾಜವನ್ನು ಅವಹೇಳನ ಮಾಡಿರುವುದನ್ನು ವಿರೋಧಿಸಿ ಹಾಗೂ ಕೂಡಲೇ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆಯವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವೀರಕನ್ನಡಿಗ ಟಿಪ್ಪು ಸೇನೆಯ ಅಕ್ಮಲ್ ಜಾವೇದ್, ರಮೇಶ್ ಬಂಡಿಸಿದ್ದೇಗೌಡ ಅವರು ಸಾರ್ವಜನಿಕವಾಗಿ ಬಗರ್ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದ್ದ ಕೆಲ ಮುಸ್ಲಿಂ ಸಮಾಜದವರು ಅರ್ಜಿ ಸಲ್ಲಿಸಿದ್ದರ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಮುಸ್ಲಿಂರ ಬಗರ್ಹುಕುಂ ಸರ್ಕಾರಿ ಜಮೀನಿಗೆ ಸಂಬಂಧಿಸಿ ಯಾರಾದರೂ ದಾಖಲೆ ಮಾಡಿಕೊಟ್ಟರೆ ಅಂಥವರನ್ನು ನೇಣಿಗೆ ಹಾಕುತ್ತೇನೆಂದು ಸಂವಿಧಾನ ವಿರೋಧಿ ಹಾಗೂ ಅಲ್ಪಸಂಖ್ಯಾತರ ವಿರೋಧಿ ಹೇಳಿಕೆ ನೀಡಿರುವುದನ್ನು ಖಂಡಿಸಿದರು.
ಇದು ಕೇವಲ ಹೇಳಿಕೆಯಲ್ಲಿ ಭಾರತದ ಸಂವಿಧಾನಾತ್ಮಕ ಮೌಲ್ಯಗಳ ಧರ್ಮ ನಿರಾಪೇಕ್ಷೆ ಧೋರಣೆ ವಿರುದ್ದದ ನೇರ ದಾಳಿಯಾಗಿದೆ. ಇದನ್ನು ರಾಜ್ಯಾದ್ಯಂತ ಮುಸ್ಲಿಂ ಸಮುದಾಯ ತೀವ್ರವಾಗಿ ಖಂಡಿಸುತ್ತದೆ.
ಶಾಸಕಾಂಗದ ಪ್ರತಿನಿಧಿಯಾಗಿರುವ ಶಾಸಕರು, ಸಂವಿಧಾನದ ಅನುಚ್ಛೇಧ 51ಎ ಖಂಡಿಕೆ (ಈ) ಪ್ರಕಾರ, ದೇಶದ ಎಲ್ಲಾ ಧಾರ್ಮಿಕ ಭಾಷ ಮತ್ತು ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಭೇದ ಭಾವದಿಂದ ಅತೀತವಾಗಿ ಭಾರತದ ಎಲ್ಲಾ ಜನತೆಯಲ್ಲಿ ಸಾಮರಸ್ಯ ಮತ್ತು ಸಮಾನ ಭ್ರಾತೃತ್ವ ಬೆಳೆಸುವ ಬದಲು, ಸಾಮರಸ್ಯ ಹದಗೆಡಿಸುವ ಹಾಗೂ ಸಮಾಜದಲ್ಲಿ ಆಶಾಂತಿ ಸೃಷ್ಟಿಸುವ ಅವ್ಯಾಚ್ಯ ಪದ ಪ್ರಯೋಗ ಮಾಡಿ ಅಧಿಕಾರಿ ವೃಂದದವರಲ್ಲಿ ಪ್ರಚೋದನೆ ಹುಟ್ಟು ಹಾಕುವುದರೊಂದಿಗೆ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರಿದರು.
ದೇಶದ ಕಟ್ಟಕಡೆಯ ಪ್ರಜೆಯೂ ಈ ದೇಶದ ಆಸ್ತಿ ಎಂದು ಪರಿಗಣಿಸದಿರುವುದು ಖಂಡನೀಯ, ಮುಖ್ಯಮಂತಿ ಹಾಗೂ ಉಪಮುಖ್ಯಮಂತ್ರಿ, ಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ರಮೇಶ್ ಬಂಡಿಸಿದ್ದೇಗೌಡ ಅವರನ್ನು ಪಕ್ಷದಿಂದ ಉಚ್ಚಾಟಿಸಿಬೇಕೆಂದು ಮನವಿ ಮಾಡಿದರು.
ಈ ಮನವಿಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ರಾಜ್ಯಾದ್ಯಂತ ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಮಾಲೀಕ ಎಂಬ ಧೈಯೋದ್ದೇಶದೊಂದಿಗೆ ಪ್ರಜಾಸತ್ತಾತ್ಮಕವಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆ ಮುಖ್ಯ ಸಂಚಾಲಕ ಸಮೀರ್ ಅಹಮ್ಮದ್, ಸಂಚಾಲಕ ಆಜಂಖಾನ್, ಸದಸ್ಯ ಹಿಮಾಯಾನ್, ಶಾಹನವಾಜ್, ಚಾಂದ್ ಪಾಷ, ವಜಾದ್ ಇದ್ದರು.

[…] […]