ಹಾಸನ- ಮುಸ್ಲಿಂರ ಹೆಸರಿಗೆ ಸಾಗುವಳಿ ಭೂಮಿ ಮಾಡಿಕೊಟ್ಟರೆ ನೇಣು ಹಾಕುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಶ್ರೀರಂಗಪಟ್ಟಣ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಮುಸ್ಲಿಂ ವಿರೋಧಿ ಹೇಳಿಕೆ ನೀಡಿರುವುದನ್ನು ಖಂಡಿಸಿ, ಅವರನ್ನು ಶಾಸಕ ಸ್ಥಾನದಿಂದ ವಜಾ ಗೊಳಿಸುವಂತೆ ಆಗ್ರಹಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿಆಫ್ ಇಂಡಿಯಾ ಕಾರ್ಯಕರ್ತರು ಹೇಮಾವತಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿ ಎಸ್.ಡಿ.ಪಿ.ಐ. ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ರಮೇಶ್ ಬಂಡಿಸಿದ್ದೇಗೌಡ ಅವರು ಅಲ್ಪಸಂಖ್ಯಾತ ಮುಸ್ಲಿಂ ಸಮಾಜವನ್ನು ಅವಹೇಳನ ಮಾಡಿರುವುದು ಖಂಡನೀಯ. ಇವರನ್ನು ಕೂಡಲೇ ಪಕ್ಷದಿಂದ ಉಚ್ಚಾಟಿಸಬೇಕು, ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದರು.
ರಮೇಶ್ ಬಂಡಿಸಿದ್ದೇಗೌಡರು ಬಹಿರಂಗವಾಗಿ ಮುಸಲ್ಮಾನ್ ಸಮಾಜದವರನ್ನು ಸಾಬ್ರು ಎಂದು ಹೀಯಾಳಿಸಿದ್ದಾರೆ. ಅಲ್ಲದೆ ಭೂಮಿಗಾಗಿ ಅರ್ಜಿ ಸಲ್ಲಿಸಿರುವ ಮುಸ್ಲಿಂರಿಗೆ ಅವರಂತೆ ಮಾಡಿಕೊಟ್ಟರೆ ಅಂತಹ ಅಧಿಕಾರಿಗಳನ್ನು ನೇಣಿಗೆ ಹಾಕುವುದಾಗಿ ಹೇಳಿಕೆ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಮಾತ್ರವಲ್ಲ ಸಂವಿಧಾನ ವಿರೋಧಿ ಹಾಗೂ ಅಲ್ಪಸಂಖ್ಯಾತರ ವಿರೋಧಿ ಹೇಳಿಕೆಯಾಗಿದೆ ಎಂದು ದೂರಿದರು.

ಇದು ಕೇವಲ ಹೇಳಿಕೆಯಲ್ಲ, ಭಾರತದ ಸಂವಿಧಾನತ್ಮಕ ಮೌಲ್ಯಗಳ ಮೇಲಿನ ದಮನಕಾರಿ ನಡೆಯಾಗಿದೆ. ಆದಷ್ಟು ಬೇಗ ರಮೇಶ್ ಬಂಡಿಸಿದ್ದೇಗೌಡ ಅವರ ವಿರುದ್ದ ಕಾನೂನು ಕ್ರಮ ಜರುಗಿಸದೇ ಇದ್ದರೆ ರಾಜ್ಯವ್ಯಾಪ್ತಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಎಸ್ಡಿಪಿಐ ಹಾಸನ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಜೀಲ್ ಅಹ್ಮದ್, ಕಾರ್ಯದರ್ಶಿ ಇರ್ಫಾನ್ ಪಾಷ, ರಾಜ್ಯ ಉಪಾಧ್ಯಕ್ಷ ತನ್ವೀರ್, ಸಹ ಕಾರ್ಯದರ್ಶಿ ಸಲೀಂ ಹಾಸನ್, ಸತ್ತಾರ ಗುಲಾಬ್, ಸೈಯದ್ ಫರೀದ್, ಅಮೀರ್ ಜಾನ್, ಅಕ್ಮಲ್ ಜಾವೀದ್, ಸಮೀರ್ ಮೊದಲಾದವರಿದ್ದರು.
