ಹಾಸನ- ಬಾಕಿ ಉಳಿಸಿಕೊಂಡಿರುವ ವೇತನ ನೀಡುವಂತೆ ಆಗ್ರಹಿಸಿ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ನ್ಯೂ ಮಿನರ್ವ ಮಿಲ್ ಎದುರು ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಸ್ಥಳಕ್ಕೆ ಶನಿವಾರ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಭೇಟಿ ನೀಡಿ ಕಾರ್ಮಿಕರ ಸಮಸ್ಯೆ ಆಲಿಸಿದರು.
ಕಳೆದ ಏಳು ತಿಂಗಳಿನಿಂದ ಕಾರ್ಮಿಕರಿಗೆ ವೇತನ ನೀಡಿಲ್ಲ. ವೇತನ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಹೋರಾಟ ನಡೆಯುತ್ತಿದ್ದು, ಶನಿವಾರ ಸ್ಥಳಕ್ಕೆ ಬಂದ ವ್ಯವಸ್ಥಾಪಕರನ್ನು ಕಾರ್ಮಿಕರು ತೀವ್ರ ತರಾಟೆಗೆ ತೆಗೆದುಕೊಂಡರು.
ಪ್ರಮುಖವಾಗಿ ಈಗಾಗಲೇ ಬಾಕಿ ಉಳಿಸಿಕೊಂಡಿರುವ ವೇತನವನ್ನು ಅತಿ ಶೀಘ್ರವಾಗಿ ನೀಡಬೇಕು, ಜೊತೆಗೆ ನಿಂತು ಹೋಗಿರುವ ಕಂಪೆನಿಯ ಸಾಮಗ್ರಿಗಳನ್ನು ರಕ್ಷಿಸುವ ಸಲುವಾಗಿ ಕಾರ್ಮಿಕರನ್ನು ಕಾವಲುಗಾರರನ್ನಾಗಿ ನೇಮಕ ಮಾಡಿಕೊಂಡಿದ್ದು, ಅವರಿಗೂ ವೇತನ ನೀಡುತ್ತಾರೆ ಎಂಬ ನಂಬಿಕೆ ಇಲ್ಲ. ಹಾಗಾಗಿ ಎಲ್ಲರಿಗೂ ವೇತನ ನೀಡಲು ಗಡುವು ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಕಾರ್ಮಿಕರ ನೀತಿ ನಿಯಮಗಳನ್ನು ಆಡಳಿತ ಮಂಡಳಿ ಗಾಳಿಗೆ ತೂರಿದೆ, ವ್ಯವಸ್ಥಾಪಕರು ಕಾರ್ಮಿಕರನ್ನು ಒಳಗೆ ಬಿಡದೆ ಹೋರಾಟ ಹತ್ತಿಕ್ಕಲು ಹುನ್ನಾರ ಮಾಡುತ್ತಿದ್ದಾರೆ. ಅಲ್ಲದೆ ವೇತನದ ಬಗ್ಗೆ ವ್ಯವಸ್ಥಾಪಕರಲ್ಲಿ ಕೇಳಿದರೆ ಮೇಲಾಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಹುಸಿ ಭರವಸೆ ನೀಡುತ್ತಾ ಬಂದಿದ್ದಾರೆ. ಆದುದರಿಂದ ವೇತನ ನೀಡುವವರೆಗೂ ನಮ್ಮ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಬಳಿಕ ಮಾತನಾಡಿದ ಶಾಸಕರು, ಕಾರ್ಮಿಕರ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಕೆಲಸ ಮಾಡಬೇಕು. ಈಗಾಗಲೇ ಕೈಗಾರಿಕಾ ಪ್ರದೇಶಕ್ಕಾಗಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಕಳೆದುಕೊಂಡಿರುವ ರೈತ ಕುಟುಂಬಗಳು ಇಂದು ಬೀದಿ ಪಾಲಾಗಿವೆ, ಅವರಿಗೆ ಉದ್ಯೋಗ ನೀಡಿ ಸಹಕಾರ ನೀಡಬೇಕಿರುವುದು ಕಾರ್ಖಾನೆಗಳ ಜವಾಬ್ದಾರಿ ಆದುದರಿಂದ ಸಂಸ್ಥೆ ಕೂಡಲೇ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಕೆಲಸ ಮಾಡಬೇಕಿದೆ ಎಂದರು.
ತಾನು ಕೂಡ ಶಾಸಕನಾಗಿ ಸಂಬಂಧಪಟ್ಟ ಇಲಾಖಾ ಸಚಿವರ ಬಳಿ ನಿಯೋಗ ತೆರಳಿ ಇಲ್ಲಿನ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತಂದು ಶೀಘ್ರವಾಗಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುವುದು. ಸರ್ಕಾರದ ಅಂಗ ಸಂಸ್ಥೆಯಾಗಿರುವ ಎನ್.ಟಿ.ಸಿ ಕಾರ್ಖಾನೆಯಿಂದ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.

[…] ಹಾಸನ- ವೇತನ ವಂಚನೆ ವಿರುದ್ಧ ನ್ಯೂ ಮಿನರ್ವ ಮ… […]