ಹಾಸನ, ಆಗಸ್ಟ್ 10: ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಹರಿದಾಡುತ್ತಿರುವ, ಶ್ರೀ ಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ರೀತಿಯ ಅಪಪ್ರಚಾರದ ವಿರುದ್ಧ ಭಕ್ತಾದಿಗಳು ಹಾಗೂ ಹಲವು ಸಂಘ-ಸಂಸ್ಥೆಗಳು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಹಿತರಕ್ಷಣಾ ಸಮಿತಿ, ಭಕ್ತಾದಿಗಳ ವೇದಿಕೆ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ, ಆಗಸ್ಟ್ 12, 2025 (ಮಂಗಳವಾರ) ಬೆಳಿಗ್ಗೆ 11 ಗಂಟೆಯಿಂದ ಹಾಸನದಲ್ಲಿ ಜಾಥಾ ಮತ್ತು ಪ್ರತಿಭಟನೆ ನಡೆಯಲಿದೆ. ಹೇಮಾವತಿ ಪ್ರತಿಮೆಯಿಂದ ಆರಂಭವಾಗುವ ಜಾಥಾ ಎನ್ಆರ್ ಸರ್ಕಲ್ ಮೂಲಕ ಸಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಪನಗೊಳ್ಳಲಿದೆ.
ಪ್ರತಿಭಟನಾಕಾರರು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ, ಶ್ರೀ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿರುವ ಯೂಟ್ಯೂಬ್ ಅಪಪ್ರಚಾರ ಹಾಗೂ ಇತರ ಷಡ್ಯಂತ್ರಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಿದ್ದಾರೆ. ಜೊತೆಗೆ, ಬುರುಡೆ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಆಗ್ರಹಿಸಲಾಗುವುದು.
ಆಯೋಜಕರು, ಶ್ರೀ ಕ್ಷೇತ್ರದ ಭಕ್ತಾದಿಗಳು ಹಾಗೂ ಸಮಾನ ಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಪ್ರತಿಭಟನೆಗೆ ಬೆಂಬಲ ನೀಡುವಂತೆ ಕೋರಿದ್ದಾರೆ.
