ಹಾಸನ – ಆಪರೇಷನ್ ಸಿಂಧೂರ್ ಕಾರ್ಯಚರಣೆ ವೇಳೆ ದೇಶಕ್ಕಾಗಿ ಹುತಾತ್ಮರಾದ ವೀರ ಯೋಧರಿಗೆ ಕದಂಬ ಸೈನ್ಯ ಕನ್ನಡ ಸಂಘಟನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಪುಷ್ಪಾರ್ಚನೆ ಮೂಲಕ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ನಂತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ, ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸೇನೆಯು ಆಪರೇಷನ್ ಸಿಂದೂರವನ್ನು ಪ್ರಾರಂಭಿಸಿ ಪಾಕಿಸ್ತಾನದೊಳಗೆ ದಾಳಿ ನಡೆಸಿ, ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಗುಂಪುಗಳಿಗೆ ಸೇರಿದ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸಿತು.
ಈ ದಾಳಿಯಲ್ಲಿ ನೂರಾರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ಮೂಲಕ ಭಯೋತ್ಪಾದನೆಯನ್ನು ಸಹಿಸಲಾಗುವುದಿಲ್ಲ ಎಂಬ ದಿಟ್ಟ ಸಂದೇಶವನ್ನು ಜಗತ್ತಿಗೆ ರವಾನಿಸುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರತೀಕಾರ ಮೂಲಕ ಮುಗ್ಧ ಹಿಂದೂಗಳು ಚೆಲ್ಲುವ ಪ್ರತಿ ರಕ್ತದ ಹನಿಗೂ ನ್ಯಾಯ ಒದಗಿಸಿದೆ ಎಂದರು.
ಕೇಂದ್ರ ಸರ್ಕಾರ ಯಾವುದೇ ರಾಷ್ಟ್ರ ಮಧ್ಯಸ್ಥಿಕೆ ವಹಿಸಿದರೆ ಕದನ ವಿರಾಮ ಘೋಷಣೆ ಮಾಡಬಾರದು. ಕದನ ವಿರಾಮ ಮಾಡಿದ್ದಕ್ಕೆ ಭಾರತದ ಗಡಿ ಭಾಗದ ಜಮ್ಮು ಕಾಶ್ಮೀರ, ರಾಜಸ್ಥಾನ, ಮತ್ತು ಗುಜರಾತ್ ಮೇಲೆ ಬಾಂಬ್ ದಾಳಿ ಮಾಡಿದ್ದಾರೆ. ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು ಯಾವುದೇ ಕಾರಣಕ್ಕೂ ಆಪರೇಷನ್ ಸಿಂಧೂರವನ್ನು ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಬೇಕೆಂದು ಎಂದು ಹೇಳಿದರು.
ಪಾಕಿಸ್ತಾನ ಹಲವಾರು ದಶಕಗಳಿಂದ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಲೇ ಬಂದಿದ್ದೆ, ಸಾವಿರಾರು ಅಮಾಯಕ ಜನರ ಮೇಲೆ ದಾಳಿ ಮಾಡುತ್ತಲೇ ಬರುತ್ತಿದೆ. ಭಯೋತ್ಪಾದಕರನ್ನು ಬುಡ ಸಮೇತ ತೆಗೆದು ಹಾಕಲು ದೇಶದ ಸೈನಿಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆದೇಶ ನೀಡಬೇಕು ಎಂದು ಮನವಿ ಮಾಡಿದರು.
ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಪ್ರತಿ ಮನೆ ಮನೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಅವರ ಆತ್ಮಕ್ಕೆ ಗೌರವ ಪೂರಕವಾಗಿ ಕೃತಜ್ಞತೆ ಸಲ್ಲಿಸುವುದು ಭಾರತ ದೇಶದ ಎಲ್ಲಾ ಪ್ರಜೆಗಳ ಕರ್ತವ್ಯ ಎಂದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಯಾಕುಬ್ ಖಾನ್ ಗೊರೂರು, ಸಕಲೇಶಪುರ ತಾಲ್ಲೂಕು ಅಧ್ಯಕ್ಷ ವಿಶ್ವಾಸ್ ಬಿ ಗೌಡ, ಹಿರಿಯ ಸಾಹಿತಿ ಅನಂತರಾಜ್, ಹೋರಾಟಗಾರ ಪ್ರಕಾಶ್, ರಾಜ್ಯ ಸಮಿತಿ ಸದಸ್ಯ ರಾಮು ಚಿಕ್ಕೆಗೌಡನದೊಡ್ಡಿ, ಮಂಡ್ಯ ಜಿಲ್ಲೆ ಸಂಚಾಲಕ ಸಲ್ಮಾನ್ ಇತರರು ಉಪಸ್ಥಿತರಿದ್ದರು.
