ಹಾಸನ: ಪೋಷಕರು ತಮ್ಮ ಮಕ್ಕಳನ್ನು ಬಾಲಕಾರ್ಮಿಕರಾಗಿ ದುಡಿಮೆಗೆ ಕಳುಹಿಸಬೇಡಿ ಅವರಿಗೆ ವಿದ್ಯಾಭ್ಯಾಸ ಕೊಡಿಸಿ. ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಹೇಮಾವತಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು ಮಕ್ಕಳು ಬಾಲ್ಯದಲ್ಲಿಯೇ ಬಡತನ ಇನ್ನಿತರ ಮನೆಯ ಸಮಸ್ಯೆಗಳೆಂದು ಕಾರಣವನ್ನು ಹೇಳಿಕೊಂಡು ಬಾಲಕಾರ್ಮಿಕರಾಗಬೇಡಿ, ನಿಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾವಂತರಾಗಿ ತದನಂತರ ಮನೆಯ ಜವಾಬ್ದಾರಿಗಳನ್ನು ನಿಭಾಯಿಸಿ ಎಂದು ಹೇಳಿದರು.
ಬಾಲಕಾರ್ಮಿಕ ದಿನಾಚರಣೆಗಳಲ್ಲಿ ಮಕ್ಕಳಿಗಿಂತ ಹೆಚ್ಚಾಗಿ ಪೋಷಕರಿಗೆ, ಉದ್ದಿಮೆಗಳಿಗೆ, ಕೈಗಾರಿಕೆಗಳ ಮಾಲೀಕರಿಗೆ ಇಂತಹ ಮಾಹಿತಿಯನ್ನು ನೀಡಿದರೆ ಅರ್ಥಪೂರ್ಣ ದಿನಾಚರಣೆ ಆಗುತ್ತದೆ ಎಂದರಲ್ಲದೆ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಈ ಮೂರು ಅಂಗಗಳು ಸೇರಿ ಈ ಪದ್ಧತಿಯನ್ನು ತೊಡೆದು ಹಾಕಲು ಹೆಚ್ಚಿನ ಗಮನ ಹರಿಸಿ ಸರ್ಕಾರದ ಸವಲತ್ತುಗಳನ್ನು ಸಕಾಲಕ್ಕೆ ಜನರಿಗೆ ತಲುಪುವಂತೆ ಮಾಡಿದರೆ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬಹುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಸತ್ಯಭಾಮ ಸಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳನ್ನು ಮನೆಯಲ್ಲಿ ಅಲ್ಲದೆ ಹೊರಗೆ ಹಣಕ್ಕಾಗಿ ಒತ್ತಾಯ ಪೂರ್ವಕವಾಗಿ ದುಡಿಸುವಂತಹದ್ದು ಬಾಲಕಾರ್ಮಿಕ ಪದ್ಧತಿಯಾಗಿದೆ. ಈ ರೀತಿಯಲ್ಲಿ ಎಲ್ಲಿಯಾದರೂ ಬಾಲ ಮಕ್ಕಳ ದುಡಿಸಿಕೊಳ್ಳುವುದು ಕಂಡು ಬಂದರೆ ವಿದ್ಯಾರ್ಥಿಗಳು ಆಡಳಿತಾತ್ಮಕ ಅಧಿಕಾರಿಗಳಿಗೆ ಅಥವಾ 1098 ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬಾಲಕಾರ್ಮಿಕ ಪದ್ಧತಿ ನಡೆಯುತ್ತಿದೆ ಅದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಕೈಗಾರಿಕೆಗಳ ಮಾಲೀಕರು, ಉದ್ಯಮಿಗಳ ಪಾತ್ರವೂ ಹೆಚ್ಚಿದೆ ಹಾಗಾಗಿ ಅವರುಗಳು ಈ ಕಾರ್ಯಕ್ರಮಕ್ಕೆ ಹೆಚ್ಚಿನದಾಗಿ ಆಗಮಿಸಬೇಕು ಎಂದರಲ್ಲದೆ, ತಮ್ಮ ಸುತ್ತಮುತ್ತಲಿನ ಪರಿಸರವನ್ನು ಪ್ರತಿನಿತ್ಯ ಗಮನಿಸುವ ಮೂಲಕ ನಮ್ಮ ಸಮಾಜದಲಿ ್ಲಯಾರು ಬಾಲಕಾರ್ಮಿಕರು ಇರದಂತೆ ನೋಡಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಬಿ.ಆರ್ ಮಾತನಾಡಿ ನಾವು ವಾಸಿಸುವ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಬಾಲಕಾರ್ಮಿಕರು ಕಂಡು ಬಂದಲ್ಲಿ ಅವರ ಪೋಷಕರಿಗೆ ಹಾಗೂ ಸಂಬಂಧಪಟ್ಟವರಿಗೆ ತಿಳುವಳಿಕೆ ಹೇಳುತ್ತೇವೆ ಜೊತೆಗೆ ಬಾಲಕಾರ್ಮಿಕರಿಂದ ಯಾವುದೇ ರೀತಿಯ ಸೇವೆಯನ್ನು ಪಡೆದುಕೊಳ್ಳುವುದಿಲ್ಲ ಎಂದು ಕಾರ್ಯಕ್ರಮದಲ್ಲಿ ಪ್ರಮಾಣವಚನವನ್ನು ಬೋಧಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಕೋಲಾರದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಚೌಡಪ್ಪ ಎಸ್.ಹೆಚ್ ಬಾಲ್ಯಾವಸ್ಥೆಯನ್ನು ಕಳೆದುಕೊಂಡು ಕೆಲಸ ಮಾಡುವ ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ. ನಮ್ಮ ದೇಶದಲ್ಲಿ ಹತ್ತರಲ್ಲಿ ಒಂದು ಮಗು ಮಕ್ಕಳ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಕೃಷಿ ಕೆಲಸಗಳು, ಗ್ಯಾರೇಜ್, ಹೋಟೆಲ್, ಬೇಕರಿ ಹೀಗೆ ಅನೇಕ ಭಾಗಗಳಲ್ಲಿ ಹೆಚ್ಚು ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲಸಗಳನ್ನು ಮಾಡಿಸಿಕೊಳ್ಳುವಂತಹ ಮಾಲೀಕರುಗಳಿಗೆ ಪೋಷಕರುಗಳಿಗೆ ಸರ್ಕಾರದಂಡ ವಿಧಿಸುವುದರ ಜೊತೆಗೆ ಜೈಲು ಶಿಕ್ಷೆಯನ್ನು ಸಹ ವಿಧಿಸಿ ಮಕ್ಕಳಿಗೆ ಪುನರ್ವಸತಿಕಲ್ಪಿಸುತ್ತಿದೆ ಎಂದು ಹೇಳಿದರು.
ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ತಪ್ಪಿಸಲು ಸರ್ಕಾರ ಅನೇಕ ರೀತಿಯ ಕಾಯ್ದೆ ಕಾನೂನುಗಳನ್ನ ಜಾರುಗೊಳಿಸಿದೆ ಅವುಗಳಲ್ಲಿ ಬಾಲನ್ಯಾಯಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಿಶೋರ ಕಾರ್ಮಿಕ ನಿಷೇಧ ಕಾಯ್ದೆ ಹೀಗೆ ಅನೇಕ ರೀತಿಯ ಕಾಯ್ದೆ ಕಾನೂನುಗಳನ್ನು ರೂಪಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಈ ಹಿಂದೆ ಬಾಲಕಾರ್ಮಿಕ ಪದ್ಧತಿಗೆ ಒಳಪಟ್ಟು ಅದರಿಂದ ಅವರನ್ನು ಬಿಡಿಸಿ ಹೊರತಂದು ವಿದ್ಯಾಭ್ಯಾಸ ಮಾಡಿಸುತ್ತಿರುವಂತಹ ಮಕ್ಕಳಿಗೆ ಹಾಗೂ ಈಗ 18 ವರ್ಷ ತುಂಬಿದ ಮಕ್ಕಳಿಗೆ ಬಾಲ್ಯದಲ್ಲಿ ಅವರ ಹೆಸರಿನಲ್ಲಿ ಡಿಡಿ ಇಟ್ಟಿದ್ದ 35 ಸಾವಿರದ ಚೆಕ್ ಮತ್ತು ಮಕ್ಕಳಿಗೆ ಸ್ಕೂಲ್ಕಿಟ್ ವಿತರಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಣಿ ಜಿ.ಕೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಮಧುಕುಮಾರಿ ಎಂ.ಎಸ್, ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಗುರುಪ್ರಸಾದ್ ಹೆಚ್.ಎಲ್, ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನ ಕೆ.ಎನ್ ಹಾಗೂ ವಿವಿಧ ಶಾಲೆಯ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
