ಹಾಸನ: ರಂಗಸಿರಿ ಆಶ್ರಯದಲ್ಲಿ ಜು.11ರಂದು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಮಾಯಾಮೃಗ ಮತ್ತು ಬಾನು ಮುಷ್ತಾಕ್ ಅವರ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಕೃತಿ ಎದೆಯ ಹಣತೆ ಎರಡು ನಾಟಕಗಳ ಪ್ರದರ್ಶನ ನಡೆಯಲಿವೆ ಎಂದು ರಂಗಸಿರಿ ಕಾರ್ಯದರ್ಶಿ ಶಾಡ್ರಾಕ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸತ್ಯಶೋಧನ ರಂಗ ಸಮುದಾಯ ಹೆಗ್ಗೋಡು ಅರ್ಪಿಸುವ, ಜನಮನದಾಟದ ಕಲಾವಿದರು ನಾಟಕ ಪ್ರದರ್ಶನ ಮಾಡಲಿದ್ದಾರೆ. ಮಾಯಾಮೃಗ ನಾಟಕವನ್ನು ಕುಕ್ಕಡೆಯ ರಂಜಿತ್ ಶೆಟ್ಟಿ ಅವರು ವಿನ್ಯಾಸ/ನಿರ್ದೇಶನ ಮಾಡಿದ್ದರೆ, ಎದೆಯ ಹಣತೆ ನಾಟಕವನ್ನು ಡಾ.ಎಂ.ಗಣೇಶ್ ಹೆಗ್ಗೋಡು ನಿರ್ದೇಶನ ಮಾಡಿದ್ದಾರೆ ಎಂದರು.
ಎರಡು ನಾಟಕಗಳು ತಲಾ 55 ನಿಮಿಷ ಪ್ರದರ್ಶನ ಕಾಣಲಿದ್ದು, ಮೊದಲು ಮಾಯಾಮೃಗ ಪ್ರದರ್ಶನಗೊಂಡರೆ ನಂತರ ಎದೆಯಹಣತೆ ಪ್ರದರ್ಶನವಾಗಲಿವೆ ಎಂದು ವಿವರಿಸಿದರು.
ಇದನ್ನು ಓದಿ: ಹಾಸನ: ಹೃದಯಾಘಾತ ನಿರ್ವಹಣೆಗೆ ಮೆಗಾ ತಪಾಸಣಾ ಶಿಬಿರ, ವೈದ್ಯರ ನೇಮಕ ಸೇರಿದಂತೆ ತಕ್ಷಣದ ಕ್ರಮ ಅಗತ್ಯ – ಎಚ್.ಡಿ. ರೇವಣ್ಣ
ಭಾರತೀಯ ರೆಡ್ಕ್ರಾಸ್ ಜಿಲ್ಲಾ ಸಭಾಪತಿ ಹೆಮ್ಮಿಗೆ ಮೋಹನ್ ಮಾತನಾಡಿ, ರಂಗಸಿರಿ ಆಯೋಜಿಸುವ ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿವೆ. ಇವು ಅರ್ಥಪೂರ್ಣ ನಾಟಕಗಳು, ಈ ಮೂಲಕ ಬಾನು ಮುಷ್ತಾಕ್ ಅವರಿಗೆ ಗೌರವ ನೀಡಲಾಗುತ್ತಿದೆ. ಡಿಸಿ ಲತಾಕುಮಾರಿ ಕೆ.ಎಸ್. ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್, ಕೆಯೂಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಭಾಗಿಯಾಗುವರು ಎಂದರು. ಅಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ. ಎಲ್ಲರಿಗೂ ಉಚಿತ ಪ್ರವೇಶ ಇದೆ ಎಂದರು.
ಪತ್ರಕರ್ತ ರವಿ ನಾಕಲಗೂಡು ಮಾತನಾಡಿ, ಕಲಾವಿದ ಸುರೇಶ್, ಹಿರಿಯ ರಂಗಕರ್ಮಿ ಚಂದ್ರಕಾಂತ ಪಡೆಸೂರ್, ಹಿರಿಯ ಕಲಾವಿದ ಗ್ಯಾರಂಟಿ ರಾಮಣ್ಣ, ಜವರಯ್ಯ ಇದ್ದರು.
