ಹಾಸನ, ಆ. 23: ಹಾಸನ ಜಿಲ್ಲೆಯಲ್ಲಿ 2.5 ಕೋಟಿ ರೂ. ಮೊತ್ತದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಗರಣ ಬಯಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದು, ಜಿಲ್ಲೆಯಲ್ಲಿ ಈ ವಿಷಯ ತೀವ್ರ ಚರ್ಚೆಗೆ ಕಾರಣವಾಗಿದೆ.
ಜನಸಾಮಾನ್ಯರ ವಸತಿ ಕನಸುಗಳನ್ನು ಸಾಕಾರಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿದ್ದ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅವ್ಯವಹಾರದ ಬಲಿಯಾಗಿದ್ದು, 200 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮನೆ ಕನಸು ಕಳೆದುಕೊಂಡಿವೆ.
2017-18ರಲ್ಲಿ ದೇಶಾದ್ಯಂತ ಮನೆ ಇಲ್ಲದ ಕುಟುಂಬಗಳ ಸರ್ವೇ ನಡೆದಿತ್ತು. ಬಳಿಕ 2021-22ರಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು.
ಆರೋಪದಲ್ಲಿರುವ ಅಧಿಕಾರಿಗಳು:-
ಜಿಲ್ಲಾ ಪಂಚಾಯತ್ನಲ್ಲಿ ನೋಡಲ್ ಅಧಿಕಾರಿಯಾಗಿದ್ದ ರಾಜೇಶ್ ಎಂಬವರು ಮನೆ ಕೊಡಿಸುವ ಹೆಸರಿನಲ್ಲಿ ಜನರಿಂದ ಲಕ್ಷಾಂತರ ಹಣ ಸಂಗ್ರಹಿಸಿರುವ ಆರೋಪಗಳಿವೆ. ಮೊದಲು ಕೂಡ ಅವರ ವಿರುದ್ಧ ಅವ್ಯವಹಾರ ಪ್ರಕರಣ ದಾಖಲಾಗಿದ್ದರೂ ‘ಬಿ ರಿಪೋರ್ಟ್’ ಮೂಲಕ ಪಾರಾಗಿದ್ದಾರೆ ಎನ್ನಲಾಗಿದೆ.
ಪಿಡಿಒ ಮತ್ತು ಇಒಗಳ ಯೂಸರ್ ಐಡಿ ಹಾಗೂ ಪಾಸ್ವರ್ಡ್ಗಳನ್ನು ತನ್ನ ಹೆಸರಿನಲ್ಲಿ ಮಾಡಿಕೊಂಡಿದ್ದ ರಾಜೇಶ್, ಆಧಾರ್ ಆಧಾರಿತ ಬ್ಯಾಂಕ್ ಲಿಂಕ್ ವ್ಯವಸ್ಥೆಯ ದುರುಪಯೋಗದಿಂದ ಸರಕಾರಿ ಹಣವನ್ನು ನೇರವಾಗಿ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆಂಬ ಗಂಭೀರ ಆರೋಪ ಹೊರಬಂದಿದೆ.
ಹಗರಣ ಬಯಲಾಗಲು ಕಾರಣ:-
ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಆಪ್ತ ಸರ್ಫಾರಾಝ್ ಖಾನ್ ಫೋನ್ ಸಂಭಾಷಣೆಯಲ್ಲಿ – “ಮನೆ ಕೊಡಿಸಲು ಹಣ ಬೇಕು” ಎಂಬ ಹೇಳಿಕೆ ಬಹಿರಂಗವಾದ ನಂತರ, ಯೋಜನಾ ಆಯೋಗದ ಅಧ್ಯಕ್ಷ ಬಿ.ಆರ್. ಪಾಟೀಲ್ ತೀವ್ರ ಟೀಕೆ ನಡೆಸಿದರು. ಇದರಿಂದಲೇ ಹಗರಣ ಬಯಲಾಗಿದೆಯೆಂದು ಹೇಳಲಾಗುತ್ತಿದೆ.
2023ರ ಏಪ್ರಿಲ್ 17ರ ಸರಕಾರಿ ಆದೇಶ ಪ್ರಕಾರ, ತಾಲೂಕು ಪಂಚಾಯತ್ ಇಒ ದಾಖಲಾತಿ ಪರಿಶೀಲಿಸಿದರೆ ಸಾಕು, ಜಿಲ್ಲಾ ಪಂಚಾಯಿತಿ ಮರುಪರಿಶೀಲನೆ ಅಗತ್ಯವಿಲ್ಲ ಎಂಬ ನಿಯಮ ಜಾರಿಯಾಯಿತು. ಇದನ್ನೇ ರಾಜೇಶ್ ದುರುಪಯೋಗ ಮಾಡಿಕೊಂಡು ನೂರಾರು ದಾಖಲೆಗಳನ್ನು ಅನುಮೋದನೆ ಮಾಡಿಸಿಕೊಂಡು, 2.5 ಕೋಟಿ ರೂ. ಲಪಟಾಯಿಸಿದರೆಂಬ ಆರೋಪ ಕೇಳಿ ಬಂದಿದೆ.
👉 ಈಗ ಜಿಲ್ಲೆಯ ಜನರಲ್ಲಿ ಒಂದು ಪ್ರಶ್ನೆ – ಮನೆ ನೀಡಬೇಕಾದ ಯೋಜನೆ ಹಗರಣದ ಗುಂಡಿಯಲ್ಲಿ ಸಿಲುಕಿದರೆ, ಬಡವರ ಕನಸುಗಳಿಗೆ ನ್ಯಾಯ ಯಾವಾಗ?
ಲೋಕಾಯುಕ್ತಕ್ಕೆ ದೂರು :
ಗಂಭೀರ ಬಹುಕೋಟಿ ಹಗರಣ ನಡೆದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ, ಈ ಸಂಬಂಧ ಲೋಕಾಯುಕ್ತರಿಗೆ ದೂರು ನೀಡುತ್ತಿದ್ದೇನೆ. ಈ ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಮೇಲ್ ಮಾಡಲಾಗಿದೆ. ಇದರ ಹಿಂದೆ ದೊಡ್ಡ ಜಾಲವಿದೆ.
– ಲಕ್ಷ್ಮೀ ಕಾಂತ್, ವಕೀಲರು ಹಾಸನ.
************************************************************************************
ಡಿಸಿಗೆ ಮಾಹಿತಿಯೇ ಇಲ್ಲ :
ಈ ಹಗರಣದ ಬಗ್ಗೆ ವರದಿಗಾರರು ಡಿಸಿ ಲತಾ ಕುಮಾರಿ ಅವರನ್ನು ಪ್ರಶ್ನಿಸಿದಾಗ, ನಾನು ಪತ್ರಿಕೆಯಲ್ಲಿ ನೋಡಿದ್ದೇನೆ ಅಷ್ಟೇ. ಈ ಬಗ್ಗೆ ನನಗೆ ಈವರೆಗೆ ಯಾರೂ ಮಾಹಿತಿ ನೀಡಿಲ್ಲ. ಎಲ್ಲಿ ನಡೆದಿದೆಯೋ ಅವರನ್ನೇ ಕೇಳಿ ಎಂದರು.
****************************************************************************
ಹಗರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಅಥವಾ ತಾಲೂಕು ಪಂಚಾಯತ್ ಅಧಿಕಾರಿಗಳು ಶಾಮಿಲಾಗಿಲ್ಲ. ರಾಜೇಶ್ ಬಹಳ ಸೂಕ್ಷ್ಮವಾಗಿ ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ಚಾಣಾಕ್ಷತನದಿಂದ ಅಕ್ರಮ ನಡೆಸಿದ್ದಾರೆೆ. ಯೂಸರ್ ಮತ್ತು ಪಾಸ್ವರ್ಡ್ ಗಳನ್ನ್ನು ಗೌಪ್ಯವಾಗಿ ಇರಿಸಿಕೊಂಡು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.
-ಹೆಸರು ಹೇಳದ ಅಧಿಕಾರಿ
********************************************************************************
ಅಧಿಕಾರಿಗಳ ನಿರ್ಲಕ್ಷ್ಯ :
ಹೊಸದಾಗಿ ವರ್ಗಾವಣೆಯಾದ ಇಒ ಗಂಗಾಧರ್ ಹಾಗೂ ಜಿಲ್ಲಾ ಪಂಚಾಯತ್ ಯೋಜನಾ ಅಧಿಕಾರಿ ಚಂದ್ರಮೌರ್ಯ ಇಬ್ಬರೂ ತಮ್ಮ ಅಧಿಕಾರ ವ್ಯಾಪ್ತಿಯ ಯೂಝರ್ ಐಡಿ ಹಾಗೂ ಪಾಸ್ವರ್ಡ್ಗಳನ್ನು ಪಡೆದುಕೊಳ್ಳದೆ ನಿರ್ಲಕ್ಷ್ಯ ತೋರಿರುವುದು ದೊಡ್ಡ ತಪ್ಪಾಗಿದೆ ಎಂದು ಆಡಳಿತ ವಲಯದಲ್ಲಿ ಕೇಳಿ ಬರುತ್ತಿದೆ.
*************************************************************************
ರಾಜೇಶ್ ಎಂಬವರು ತಲೆಮರೆಸಿಕೊಂಡಿದ್ದು, ಅವರ ಫೋನ್ ಸ್ವಿಚ್ ಆಫ್ ಆಗಿದೆ. ಪ್ರಕರಣದ ತನಿಖೆಯು ಪ್ರಗತಿಯದ್ದು, ರಾಜೇಶ್ ಅವರನ್ನು ಶೀಘ್ರವೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು.
-ಜಗದೀಶ್( ಪ್ರಕರಣದ ತನಿಖಾಧಿಕಾರಿ), ಸರ್ಕಲ್ ಇನ್ಸ್ಪೆಕ್ಟರ್,ಸಕಲೇಶಪುರ.
