ಹಾಸನ- ದೇವಸ್ಥಾನದಲ್ಲಿ ಪೂಜೆ ಮಾಡುವ ವಿಚಾರದಲ್ಲಿ ಆರೋಪಗಳನ್ನು ಹೊರಿಸಿ ಗ್ರಾಮದ ಕೆಲವರು ಕಿರುಕುಳ ನೀಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಅರ್ಚಕ ರಂಗಸ್ವಾಮಿ ಸಾವಿಗೆ ಕಾರಣಕರ್ತರಾದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘವು ಜಿಲ್ಲಾಧಿಕಾರಿ ಕಛೇರಿ ಎದುರು ಶಾಂತಿಯುತ ಪ್ರತಿಭಟನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎಂ.ಎಸ್ ವೆಂಕಟಾಚಲಯ್ಯ, ಬೇಲೂರು ತಾಲೂಕಿನ ಗಂಗೂರು ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ರಂಗಸ್ವಾಮಿ ಅರ್ಚಕರು ದೇವಸ್ಥಾನ ಪೂಜೆ ಮಾಡುವ ವಿಚಾರದಲ್ಲಿ ಆರೋಪಗಳನ್ನು ಹೊರಿಸಿ ಗ್ರಾಮದ ಕೆಲವರು ಕಿರುಕುಳ ನೀಡಿದ್ದರು ಎನ್ನುವ ಆರೋಪದ ಹಿನ್ನೆಲೆ ಅರ್ಚಕ ರಂಗಸ್ವಾಮಿ ಹಾಗೂ ಗ್ರಾಮಸ್ಥರ ನಡುವೆ ವಿವಾದ ಏರ್ಪಟ್ಟಿತ್ತು. ಇದರಿಂದ ಮನನೊಂದ ಅರ್ಚಕ ದೇವಾಲಯದಲ್ಲೇ ನೇಣಿಗೆ ಶರಣಾಗಿದ್ದಾರೆ. ಅರ್ಚಕರಿಗೆ ಕಿರುಕುಳ ನೀಡಿದ ಆರೋಪಿಗಳನ್ನು ಈ ವರೆಗೂ ಪೋಲಿಸರು ವಶಕ್ಕೆ ಪಡೆದಿಲ್ಲ, ಹಾಗೂ ಈ ಪ್ರಕರಣ ಕುರಿತು ಸರಿಯಾದ ತನಿಖೆಯನ್ನು ಸಹ ನಡೆಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಜಿ.ಆರ್. ರಾಮಚಂದ್ರೇಗೌಡ, ಜಿ.ಪಿ. ಸಿದ್ದೇಶ್, ಮೂಡಲಗಿರಿಗೌಡ, ಶಿವಲಿಂಗೇಗೌಡ, ಗುರುಮೂರ್ತಿ ದೇವಾಲಯದಲ್ಲಿ ಕಮಿಟಿ ಮಾಡಿಕೊಂಡು ಪ್ರತಿನಿತ್ಯ ಅರ್ಚಕರಿಗೆ ಇನಾಂ ರದ್ದತಿಯಲ್ಲಿ ಸರಕಾರದಿಂದ ಮಂಜೂರಾದ ಜಮೀನನನ್ನು ನಮ್ಮ ಕಮಿಟಿಗೆ ಮಾಡಿಕೊಡಿ ಎಂದು ಕಮಿಟಿಯವರು ಬೈಯುತ್ತ ಮಾನಸಿಕ ಹಿಂಸೆ ಕೊಡುತ್ತಿದ್ದ ಬಗ್ಗೆ ತಾಲೂಕು ತಹಶೀಲ್ದಾರ್ರವರಿಗೆ ಮೃತ ರಂಗಸ್ವಾಮಿ ಮನವಿ ಸಹ ನೀಡಿದ್ದಾರೆ. ಆದರೆ ಆತನಿಗೆ ನ್ಯಾಯ ಸಿಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮೃತ ಅರ್ಚಕರ ಮನೆಗೆ ಇಲಾಖೆಯಿಂದ ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲ. ಈ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿರುವುದರಿಂದ ಮೃತರ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ನೀಡಬೇಕು ಹಾಗೂ ಅರ್ಚಕರ ಸಾವಿಗೆ ಕಾರಣರಾದ ಆರೋಪಿಗಳನ್ನು ಈ ಕೂಡಲೇ ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪ್ರತಿಭಟನಕಾರರು ಡಿಸಿ ಸತ್ಯಭಾಮ ಮತ್ತು ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ತಮ್ಮಯ್ಯ ಅವರಿಗೆ ಈ ಪ್ರಕರಣ ಕುರಿತು ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಕೆ ಶ್ರೀನಿವಾಸ ಮೂರ್ತಿ, ಜಿಲ್ಲಾಧ್ಯಕ್ಷ ಸೋಮಶೇಖರಯ್ಯ, ಬೇಲೂರು ಅಧ್ಯಕ್ಷ ಬಸಪ್ಪ, ಶ್ರೀಧರ್ , ಸಂತೋಷ್ , ಗೋಪಿನಾಥ್ ಇತರರು ಹಾಜರಿದ್ದರು.
