ಹಾಸನ- ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಮೆರಿಕ ಪ್ರವಾಸಕ್ಕೆ ಹೋಗಲು ವಿದೇಶಾಂಗ ಸಚಿವಾಲಯ ಅನುಮತಿ ನಿರಾಕರಿಸಿರುವುದನ್ನು ಜಿಲ್ಲೆಯ ದಲಿತ ಮುಖಂಡರು ತೀವ್ರವಾಗಿ ಖಂಡಿಸಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಕೀಲ ಬಿ.ಸಿ.ರಾಜೇಶ್, ಸಚಿವರು ವೈಯಕ್ತಿಕವಾಗಿ ಅಲ್ಲದೆ, ಹಲವು ಉದ್ದೇಶ ಇಟ್ಟುಕೊಂಡು ಅಮೆರಿಕಾ ಪ್ರವಾಸಕ್ಕೆ ಹೊರಟಿದ್ದರು. ಆದರೂ ಇದಕ್ಕೆ ಅಡ್ಡಿ ಪಡಿಸಿರುವುದು ದುರುದ್ದೇಶದ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಿಯಾಂಕ್ ಖರ್ಗೆ ಅವರು ರಾಜ್ಯದ ಒಳಿತಿಗಾಗಿ ಅಮೆರಿಕಕ್ಕೆ ತೆರಳುತ್ತಿದ್ದರೇ ಹೊರತು, ಮಜಾ ಮಾಡಲು ಅಲ್ಲ. ಬಂಡವಾಳ ಹೂಡಿಕೆ ಉದ್ದೇಶದಿಂದ ಸಚಿವರು ಅಲ್ಲಿಗೆ ತೆರಳುತ್ತಿದ್ದರು. ಅಲ್ಲಿನ ವಿವಿಧ ವಿವಿಗಳಲ್ಲಿ ಅಭಿವೃದ್ಧಿ ಕುರಿತ ಸೆಮಿನಾರ್ನಲ್ಲಿ ಭಾಗಿಯಾಗುತ್ತಿದ್ದರು. ಆದರೆ ದಲಿತರು ಬೆಳೆಯಬಾರದು ಎನ್ನುವುದೇ ಬಿಜೆಪಿಯ ದುರುದ್ದೇಶವಾಗಿದೆ ಎಂದು ಕಿಡಿಕಾರಿದರು. ಇದು ರಾಜ್ಯಕ್ಕೆ ಮಾಡಿರುವ ಅನ್ಯಾಯ. ಮೋದಿ ಒಬ್ಬರೇ ವಿದೇಶ ಪ್ರವಾಸ ಮಾಡಬೇಕಾ. ಹಿಂದುಳಿದ ವರ್ಗದ ಯಾರೂ ತಮ್ಮ ಪಾಂಡಿತ್ಯ ಪ್ರದರ್ಶಿಸಬಾರದಾ, ತಾವು ಮಾತ್ರ ಶ್ರೇಷ್ಠ ಎಂಬ ಭಾವನೆ ಬಿಜೆಪಿ ಅವರಿಗಿದೆ ಎಂದರು.
ಹಿರಿಯ ದಲಿತ ಮುಖಂಡ ಎಚ್.ಕೆ.ಸಂದೇಶ್ ಮಾತನಾಡಿ, ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಅಮೆರಿಕ ಪ್ರವಾಸ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸಿದೆ. ಈ ದೇಶದಲ್ಲಿ ದಲಿತರು ವಿದೇಶ ಪ್ರವಾಸ ಮಾಡಬಾರದು ಎಂಬ ಕಾನೂನು ಇದೆಯಾ, ಪ್ರಧಾನಿ ಮೋದಿ ಅವರು ಮಾತ್ರ ಲಕ್ಷಾಂತರ ಬೆಲೆ ಬಾಳುವ ಸೂಟು ಬೂಟು ಧರಿಸಿ ವಿದೇಶ ಪ್ರವಾಸ ಮಾಡುತ್ತಾರೆ. ಅದೇ ಒಬ್ಬ ದಲಿತ ಸಚಿವ ವಿದೇಶ ಪ್ರವಾಸಕ್ಕೆ ಅನುಮತಿ ಕೇಳಿದರೆ ನಿರಾಕರಣೆ ಮಾಡಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ದಲಿತ ಮುಖಂಡರಾದ ಕೆರಗೋಡು ಎಂ.ಸೋಮಶೇಖರ್, ದೇವರಾಜ್, ಪರಮೇಶ್, ಪುಟ್ಟಯ್ಯ, ಮಾದಿಗ ದಂಡೋರ ಸಮಿತಿಯ ವಿಜಯಕುಮಾರ್ ಇದ್ದರು.
ಹಾಸನ- ಆಲ್ಟೋ ಮತ್ತು Nxon ವಾಹನಗಳ ಮುಖಾಮುಖಿ ಡಿಕ್ಕಿ: ಅರಸೀಕೆರೆ ರಸ್ತೆಯ ಬಿ.ಕಾಟಿಹಳ್ಳಿಯಲ್ಲಿ ಅಪಘಾತ

[…] _ಹಾಸನ- ಪ್ರಿಯಾಂಕ್ ಖರ್ಗೆ ವಿದೇಶ ಪ್ರವಾಸ ನಿ… […]