ಹಾಸನ: ಕರ್ನಾಟಕ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಹಿಂದಿಯನ್ನು ಕಡ್ಡಾಯವಾಗಿಸುವ ತೃತೀಯ ಭಾಷಾ ನೀತಿ ವಿರೋಧಿಸಿ, ದ್ವಿಭಾಷಾ ನೀತಿ ಜಾರಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಎನ್.ಆರ್.ವೃತ್ತದಿಂದ ಮೆರವಣಿಗೆ ಹೊರಟು, ಡಿಸಿ ಕಚೇರಿ ಎದುರು ಧರಣಿ ನಡೆಸಿ, ದ್ವಿಭಾಷಾ ನೀತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಹಾಸನ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಶಿಕ್ಷಣದಲ್ಲಿ ಹಿಂದಿಯನ್ನು ತೃತೀಯ ಭಾಷೆಯಾಗಿ ಕಡ್ಡಾಯವಾಗಿರಿಸಿರುವ ರಾಜ್ಯ ಪಠ್ಯಕ್ರಮವನ್ನು ತೀವ್ರವಾಗಿ ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಇದನ್ನು ಓದಿ: ಹಾಸನ: ವಿದ್ಯುತ್ ದುರಸ್ತಿ ವೇಳೆ ದುರಂತ: ಲೈನ್ ಮ್ಯಾನ್ ವರುಣ್ ದುರ್ಮರಣ, ಸಂಸದ ಶ್ರೇಯಸ್ ಪಟೇಲ್ ಸಾಂತ್ವನ
ಪ್ರಮುಖ ಒತ್ತಾಯಗಳು:
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಕಡ್ಡಾಯಗೊಳಿಸಿ ದ್ವಿಭಾಷಾ ನೀತಿ ಜಾರಿಗೆ ತರಬೇಕು. ತೃತೀಯ ಭಾಷೆಯಾಗಿ ಹಿಂದಿಯನ್ನು ಪಠ್ಯಕ್ರಮದಿಂದ ತೆಗೆದು ಹಾಕಬೇಕು. ರಾಜ್ಯ ಹಾಗೂ ಕೇಂದ್ರ ಶಿಕ್ಷಣ ಮಂಡಳಿಗಳಾದ ಸಿಬಿಎಸ್ಇ, ಐಸಿಎಸ್ಇ ಶಾಲೆಗಳಲ್ಲಿ ಏಕರೂಪದ ದ್ವಿಭಾಷಾ ನೀತಿ ಜಾರಿಗೆ ತರಬೇಕು.ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳಿಗೆ ಉತ್ತಮ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಒದಗಿಸಬೇಕು.
2024 ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 90,794 ವಿದ್ಯಾರ್ಥಿಗಳು ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದು, ಈ ಶೈಕ್ಷಣಿಕ ಒತ್ತಡದಿಂದ ಶೆ.21 ರಷ್ಟು ವಿದ್ಯಾರ್ಥಿಗಳ ಭವಿಷ್ಯ ತೊಂದರೆಯಲ್ಲಿ ಸಿಕ್ಕಿಬಿದ್ದಿದೆ. 2025ರ ವೀಕ್ಷಣೆ ಪ್ರಕಾರ ಈ ಸಂಖ್ಯೆ 1.2 ಲಕ್ಷಕ್ಕಿಂತ ಹೆಚ್ಚು ಎಂದು ನಿರೀಕ್ಷಿಸಲಾಗಿದೆ.
ಇದನ್ನು ಓದಿ: ಹೃದಯಾಘಾತದಿಂದ ಯುವಜನರಲ್ಲಿ ಸಂಭವಿಸಿದ ಸಾವುಗಳಿಗೆ ಕೋವಿಡ್ ಲಸಿಕೆ ಅಥವಾ ಸೋಂಕಿಗೆ ಸಂಬಂಧವಿಲ್ಲ – ತಜ್ಞರ ಸಮಿತಿ ಸ್ಪಷ್ಟನೆ
ರಾಜ್ಯಪಾಲನ ಮಾದರಿಗಳಂತೆ ದ್ವಿಭಾಷಾ ನೀತಿ ಕರ್ನಾಟಕ ರಾಜ್ಯಕ್ಕೆ ಅನಿವಾರ್ಯ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ತಮಿಳು-ಇಂಗ್ಲಿಷ್, ಮರಾಠಿ-ಇಂಗ್ಲಿಷ್ ಜೋಡಿಗಳೊಂದಿಗೆ ದ್ವಿಭಾಷಾ ನೀತಿ ಯಶಸ್ವಿಯಾಗಿ ಜಾರಿಗೆ ಬಂದು ಹಲವು ದಶಕ ಕಳೆದಿವೆ. ಇಂತಹ ನೀತಿಯ ಅನುಸರಣೆ ಕನ್ನಡಿಗರ ಶೈಕ್ಷಣಿಕ ಭವಿಷ್ಯಕ್ಕಾಗಿ ಕರುನಾಡಿನಲ್ಲೂ ಆಗ ಬೇಕಾಗಿದೆ ಎಂದು ಆಗ್ರಹಿಸಿದರು. ನಂತರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸೀತಾರಾಂ, ಹೇಮಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ತನುಗೌಡ, ಕಾರ್ಯದರ್ಶಿ ರಘುಪಾಳ್ಯ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿಗೌಡ, ಸಕಲೇಶಪುರ ತಾಲೂಕು ಅಧ್ಯಕ್ಷ ಗಗನ್ಗೌಡ, ಬೇಲೂರು ಅಧ್ಯಕ್ಷ ಬಿ. ಚಂದ್ರಶೇಖರ್, ಚನ್ನರಾಯಪಟ್ಟಣ ಅಧ್ಯಕ್ಷ ಮಧು ಕರಡೇವು, ಅರಸೀಕೆರೆ ಅಧ್ಯಕ್ಷ ಕಿರಣ್ ಕುಮಾರ್, ಹೊಳೆನರಸೀಪುರ ತಾಲೂಕು ಅಧ್ಯಕ್ಷ ಓಯಿಲೇಶ್, ಅರಕಲಗೂಡು ಅಧ್ಯಕ್ಷ ಸೋಮಶೇಖರ್, ಆಲೂರು ಅಧ್ಯಕ್ಷ ನಟರಾಜ್, ಸಾಮಾಜಿಕ ಜಾಲತಾಣದ ಸಂಚಾಲಕ ಎಸ್.ಎ.ಅಬ್ದುಲ್ ಖಾದರ್, ಮೋಹನ್ ಗೌಡ, ಚಂದ್ರೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ, ರಾಜ್ಯ ಪರಿಷತ್ ಸದಸ್ಯ ಹೆತ್ತೂರು ನಾಗರಾಜ್ ಮೊದಲಾದವರು ಭಾಗಿಯಾಗಿದ್ದರು.
