ಹಾಸನ: ಹಾಸನ ಮಹಾನಗರಪಾಲಿಕೆ ವ್ಯಾಪ್ತಿಯ ಎನ್.ಆರ್ ವೃತ್ತದಲ್ಲಿ ಮೈಸೂರು ಮಹಾರಾಜರಾದ ದಿವಂಗತ ಶ್ರೀ ನರಸಿಂಹರಾಜ ಒಡೆಯರ್ ಅವರ ಪುತ್ಥಳಿ ಪ್ರತಿಷ್ಠಾಪನೆ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ/ಸಲಹೆ ಆಹ್ವಾನಿಸಿರುವ ಪ್ರಕಟಣೆಯ ಹಿನ್ನೆಲೆಯಲ್ಲಿ, ನಗರದ ಕೇಂದ್ರ ವೃತ್ತದಲ್ಲಿ ಹೊಯ್ಸಳರ ಲಾಂಛನ ಅನಾವರಣಗೊಳ್ಳಬೇಕು ಎಂದು ಹಾಸನಾಂಬೆ ಜಾತ್ರಾ ಹಿತ ರಕ್ಷಣಾ ಸಮಿತಿ ವತಿಯಿಂದ ಹಾಸನ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು “ಹೊಯ್ಸಳರ ಅಸ್ಮಿತೆ ಉಳಿಯಲಿ” ಎಂಬ ಆಶಯದೊಂದಿಗೆ ಹಾಸನದ ಡಾ. ಎನ್. ರಮೇಶ್ (ಹಾಸನಾಂಬೆ ಮಕ್ಕಳು) ಅವರು ಮಹಾನಗರಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಎನ್.ಆರ್ ವೃತ್ತದಲ್ಲಿ ಮಹನೀಯರ ಪುತ್ಥಳಿ ಸ್ಥಾಪನೆ ಸಮಯೋಚಿತ ಮತ್ತು ಶ್ಲಾಘನೀಯವಾದ ನಿರ್ಧಾರವಾಗಿದ್ದು, ಅದರ ಜೊತೆಗೆ ನಗರ ಸಾಂಸ್ಕೃತಿಕ ಅಸ್ಮಿತೆಯನ್ನು ಪ್ರತಿಬಿಂಬಿಸುವ ಚಿಹ್ನೆಯ ಸ್ಥಾಪನೆಯೂ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮನವಿಯಲ್ಲಿ, “ಹಾಸನ ಜಿಲ್ಲೆ ಎಂದರೆ ಹೊಯ್ಸಳರು; ಹೊಯ್ಸಳರು ಎಂದರೆ ಹಾಸನ” ಎಂದು ಉಲ್ಲೇಖಿಸಿರುವ ಅವರು, 350 ವರ್ಷಗಳ ಕಾಲ ಈ ನಾಡನ್ನು ಆಳಿದ ಹೊಯ್ಸಳರು ಕಲೆ, ಶಿಲ್ಪ, ಸಂಸ್ಕೃತಿ, ಕೆರೆಕಟ್ಟೆ, ದೇವಾಲಯಗಳ ಮೂಲಕ ರಾಜ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಹೊಯ್ಸಳ ದೇವಾಲಯಗಳು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವುದು ಅವರ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಕಾಲದ ಸಾಕ್ಷಿಯಾಗಿ ನಿಂತ ಚಟ್ಟೇಶ್ವರ: ಹೊಯ್ಸಳ ಇತಿಹಾಸದ ಒಂದು ಅಧ್ಯಾಯ
ಆದರೂ, ಹಾಸನ ನಗರದಲ್ಲಿ ಹೊಯ್ಸಳರ ಅಸ್ಮಿತೆಯನ್ನು ಶಾಶ್ವತವಾಗಿ ಪ್ರತಿಬಿಂಬಿಸುವ ಪ್ರಾತಿನಿಧಿಕ ಸ್ಮಾರಕಗಳ ಕೊರತೆ ಇದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ಹಿಂದೆ ಎನ್.ಆರ್ ವೃತ್ತದಲ್ಲಿ ಹೊಯ್ಸಳರ ಲಾಂಛನ ಸ್ಥಾಪನೆ ಕುರಿತು ಭರವಸೆ ನೀಡಲಾಗಿದ್ದರೂ ಅದು ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ನಗರದ ಹೃದಯ ಭಾಗವಾದ ಎನ್.ಆರ್ ವೃತ್ತದಲ್ಲಿ (ಪ್ರಸ್ತುತ ಫೌಂಟನ್ ಇರುವ ಸ್ಥಳದಲ್ಲಿ) ಸಳ ಹುಲಿಯನ್ನು ಕೊಲ್ಲುತ್ತಿರುವ ಹೊಯ್ಸಳರ ಲಾಂಛನವನ್ನು ಬೃಹತ್ ರೂಪದಲ್ಲಿ ಸ್ಥಾಪಿಸಿದರೆ, ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ಹೊಯ್ಸಳರ ಬಗ್ಗೆ ಹೆಮ್ಮೆ ಮೂಡುವುದಲ್ಲದೆ ನಗರ ಸೌಂದರ್ಯಕ್ಕೂ ಮೆರಗು ನೀಡಲಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ. ಹಾಸನಾಂಬೆ ದೇವಿ ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಭೇಟಿ ನೀಡುವ ಹಿನ್ನೆಲೆಯಲ್ಲಿ, ಈ ಲಾಂಛನವು ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿಯೂ ಹೊಯ್ಸಳರ ಸಂದೇಶವನ್ನು ಹರಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ.
ಒಟ್ಟಿನಲ್ಲಿ, ನಾಡಿನ ಅಸ್ಮಿತೆಯಾದ ಹೊಯ್ಸಳರ ಸ್ಮರಣೆ ಸದಾ ಜೀವಂತವಾಗಿರಲಿ ಎಂಬ ಉದ್ದೇಶದಿಂದ ಎನ್.ಆರ್ ವೃತ್ತದಲ್ಲಿ ಹೊಯ್ಸಳರ ಲಾಂಛನ ಅನಾವರಣಗೊಳಿಸುವಂತೆ ಮಹಾನಗರಪಾಲಿಕೆಗೆ ಮನವಿ ಸಲ್ಲಿಸಲಾಗಿದೆ.




