ಹಾಸನ: ನಗರದ ಸಂಜೀವಿನಿ ಸೌಹಾರ್ದ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿದ್ದ 6 ಮಂದಿಯನ್ನು ದುರುದ್ದೇಶದಿಂದ ಅನರ್ಹಗೊಳಿಸಿದ್ದ ಆದೇಶಕ್ಕೆ ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ನ್ಯಾಯಾಲಯ ತಡೆ ನೀಡಿದೆ.
ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಬ್ಯಾಂಕ್ ಅಧ್ಯಕ್ಷ ಪರಮೇಶ್, 2008ರಲ್ಲಿ ಶಾಸಕರಾಗಿದ್ದ ದಿ.ಹೆಚ್.ಎಸ್.ಪ್ರಕಾಶ್ ಅವರು ಈ ಬ್ಯಾಂಕ್ ಸ್ಥಾಪನೆ ಮಾಡಿದರು. ಇದರಲ್ಲಿ 504 ಷೇರುದಾರರಿದ್ದಾರೆ. ಸಂಜೀವಿನಿ ಸಹಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ತ್ವರಿತವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದು ಇದರ ಉದ್ದೇಶ, ಕ್ರಮೇಣ ಪ್ರಕಾಶ್ ಅವರ ಆರೋಗ್ಯ ಸರಿ ಇಲ್ಲದ ಕಾರಣ 2018 ರಲ್ಲಿ ಹೊಸ ಆಡಳಿತ ಮಂಡಳಿ ರಚಿಸಿದರು.
ಆದರೆ 2020 ರಲ್ಲಿ ಸಂಜೀವಿನಿ ಸಹಕಾರಿ ಆಸ್ಪತ್ರೆಯ ನೂತನ ಆಡಳಿತ ಮಂಡಳಿಯವರು, ಕೆಲ ಚುನಾಯಿತ ನಿರ್ದೇಶಕರ ಈ ಬ್ಯಾಂಕಿನ ವ್ಯವಹಾರಗಳಿಗೆ ಅಡ್ಡಿಪಡಿಸಿ, ಸಾಲವಸೂಲಾತಿಗೂ ಅವಕಾಶ ನೀಡುತ್ತಿಲ್ಲ. ಅಲ್ಲದೆ 2020-21ನೇ ಸಾಲಿನ ವಾರ್ಷಿಕ ಸಭೆ ನಡೆಸಲು ಹಾಗೂ ಲೆಕ್ಕ ಪರಿಶೋಧನಾ ವರದಿ ಸಲ್ಲಿಸಲೂ ಅವಕಾಶ ನೀಡಿಲ್ಲ. 2023 ರಲ್ಲಿ ವಿಶೇಷ ಅಧಿಕಾರಿಗಳನ್ನು ನೇಮಿಸಿ ಅವರಿಗೆ ತಪ್ಪು ಮಾಹಿತಿ ನೀಡಿ ವಾರ್ಷಿಕ ಮಹಾಸಭೆ ನಡೆಸಲು ಹಾಗೂ ಲೆಕ್ಕ ಪರಿಶೋಧನಾ ವರದಿ ಸಲ್ಲಿಸದಂತೆ ಅಡ್ಡಿ ಪಡಿಸಿದ್ದಾರೆ ಎಂದು ದೂರಿದರು.
ಅದಾದ ಬಳಿಕ 2024 ಡಿಸೆಂಬರ್ನಲ್ಲಿ ಬ್ಯಾಂಕ್ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆದು ಹೊಸ ನಿರ್ದೇಶಕರು ಆಯ್ಕೆಯಾದರೂ ಅವರು ಆಡಳಿತ ನಡೆಸಲು ಬಿಡದೆ ಜಿ.ಕೆ.ಕುಮಾರಸ್ವಾಮಿ ಮೊದಲಾದವರು 6 ಮಂದಿ ನಿರ್ದೇಶಕರು ಅನರ್ಹಗೊಳ್ಳುವಂತೆ ಮಾಡಿದ್ದರು. ಮಾತ್ರವಲ್ಲ ಬ್ಯಾಂಕ್ ಸೂಪರ್ ಸೀಡ್ ಮಾಡಿಸುವ ಬೆದರಿಕೆ ಒಡ್ಡಿದ್ದರು. ಅನರ್ಹಗೊಂಡಿದ್ದ ನಿರ್ದೇಶಕರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿ ಸಹಕಾರ ಸಂಘಗಳ ನಿಬಂಧಕರು ತಡೆ ನೀಡಿದ್ದಾರೆ. ಮುಂದಿನ ವಿಚಾರಣೆ ಆ.1 ರಂದು ನಿಗದಿಯಾಗಿದ್ದು, ಚುನಾಯಿತ ನಿರ್ದೇಶಕರನ್ನು ದುರುದ್ದೇಶದಿಂದ ಅನರ್ಹಗೊಳ್ಳುವಂತೆ ಮಾಡಿದ್ದವರಿಗೆ ಮುಖಭಂಗ ಆಗಿದ್ದು, ಮುಂದೆಯೂ ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಅಧ್ಯಕ್ಷರಾದ ಗಿರೀಗೌಡ, ಗಣೇಶ್, ಅರುಣ್ಕುಮಾರ್, ಶಂಕರ್, ಸುರೇಶ್, ಪುಟ್ಟರಾಜು ಇದ್ದರು.
