ಹಾಸನ- ಕಳೆದ ಏಳು ತಿಂಗಳಿನಿಂದ ಕಾರ್ಮಿಕರಿಗೆ ವೇತನ ನೀಡಿಲ್ಲ. ತಕ್ಷಣ ಪೂರ್ಣ ಸಂಬಳ ನೀಡವಂತೆ ಆಗ್ರಹಿಸಿ ನಗರ ಸಮೀಪದ ಹನುಮಂತಪುರ ಬಳಿಯ ಕೈಗಾರಿಕಾ ಪ್ರದೇಶದಲ್ಲಿರುವ ನ್ಯೂ ಮಿನರ್ವ ಮಿಲ್ ಬಟ್ಟೆ ಫ್ಯಾಕ್ಟರಿಯ ಕಾರ್ಮಿಕರು ಅನಿರ್ದಿಷ್ಠಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಎ.ಐ.ಟಿ.ಯು.ಸಿ. ಜಿಲ್ಲಾಧ್ಯಕ್ಷ ಎಂ.ಸಿ. ಡೋಂಗ್ರೆ, ನ್ಯೂ ಮಿನರ್ವ ಮಿಲ್ ಸಂಸ್ಥೆಯು ನ್ಯಾಷನಲ್ ಟೆಕ್ಸ್ ಟೈಲ್ಸ್ ಕಾರ್ಪೋರೇಷನ್ (ಎನ್.ಟಿ.ಸಿ) ಭಾಗವಾಗಿದ್ದು, ದೇಶಾದ್ಯಂತ ಈ ರೀತಿಯ 23 ಘಟಕಗಳು ಇದೆ.
ಈ ಎಲ್ಲಾ ಘಟಕಗಳು ಮಾರ್ಚ್ 2020 ರಿಂದ ಸ್ಥಗಿತಗೊಂಡಿವೆ. 2020 ಏ.1ರಿಂದ ಕಾರ್ಮಿಕರಿಗೆ ಪೂರ್ತಿ ಸಂಬಳ ನೀಡದೆ ಶೇ. 50 ರಷ್ಟು ಸಂಬಳ ನೀಡುತ್ತಾ ಬಂದಿದ್ದಾರೆ ಎಂದು ದೂರಿದರು.
ಉಳಿದ ವ್ಯತ್ಯಾಸದ ವೇತನವನ್ನು ಯಾವಾಗಲಾದರೊಮ್ಮೆ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ ಎಂದು ದೂರಿದರು. ಕಳೆದ ನವೆಂಬರ್ 2024 ರಿಂದ ವೇತನವನ್ನೇ ನೀಡಿಲ್ಲ. ಇದರಿಂದಾಗಿ ಕಾರ್ಮಿಕರ ಜೀವನ ಅತಂತ್ರಗೊಂಡು ದುಸ್ತರವಾಗಿದೆ. ಇದರ ಪರಿಣಾಮವಾಗಿ ಕಾರ್ಮಿಕರ ಇ.ಎಸ್.ಐ, ಪ್ರಾವಿಡೆಂಟ್ ಫಂಡ್ಗಳಿಗೆಲ್ಲ ಕಂತುಗಳು ಸಂದಾಯವಾಗದೆ ಈ ಸೌಲಭ್ಯಗಳು ಕಾರ್ಮಿಕರಿಗೆ ಇದ್ದು ಇಲ್ಲದಂತಾಗಿದೆ ಎಂದರು.
ಈ ವಿಚಾರಗಳ ಕುರಿತು ಮ್ಯಾನೇಜ್ಮೆಂಟ್ ಗಮನವನ್ನು ಅನೇಕ ಬಾರಿ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆ ಕುರಿತು ಈ ವಿಚಾರಗಳನ್ನು ಮುಂದಿಟ್ಟುಕೊಂಡು ನ್ಯೂ ಮಿನರ್ವ ಮಿಲ್ ಫ್ಯಾಕ್ಟರಿ ಮುಂದೆ ಕಾರ್ಮಿಕರು ಸೇರಿ ಪ್ರತಿಭಟನೆ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.
ಸರಕಾರದ ಗಮನ ಸೆಳೆದರೂ ಕೂಡ ಇದುವರೆಗೂ ಯಾವ ಗಮನವಹಿಸಿ ಸಮಸ್ಯೆ ಬಗೆಹರಿಸಿಲ್ಲ. ಮಿನರ್ವ ಮಿಲ್ ಬಟ್ಟೆ ಪ್ಯಾಕ್ಟರಿ ಮ್ಯಾನೇಜ್ಮೆಂಟ್ ಅತ್ಯಂತ ಬೇಜವಾಬ್ದಾರಿಯಾಗಿದ್ದು, ಕೂಡಲೇ ಏಳು ತಿಂಗಳ ಸಂಬಳ ಕಾರ್ಮಿಕರಿಗೆ ಕೊಡಲು ಆಗ್ರಹಿಸಿ ಶನಿವಾರ ತೀವ್ರತರ ಹೋರಾಟ ಮಾಡಲಾಗುವುದು. ನಮ್ಮ ಬೇಡಿಕೆ ಈಡೇರದಿದ್ದರೆ, ಇಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಹೋಗಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಜಿಲ್ಲಾಧಿಕಾರಿಗಳು ಕೂಡ ಕಾರ್ಮಿಕರಿಗೆ ಆಗುತ್ತಿರುವ ಈ ಅನ್ಯಾಯವನ್ನು ಗಂಭೀರವಾಗಿ ಗಮನಕ್ಕೆ ತೆಗೆದುಕೊಂಡು ಮಧ್ಯ ಪ್ರವೇಶಿಸಬೇಕಾಗಿ ವಿನಂತಿಸಿದ ಅವರು, ಮಾರ್ಚ್ 2020 ರಿಂದ ಸ್ಥಗಿತಗೊಂಡಿರುವ ಘಟಕವನ್ನು ಪುನರಾರಂಭಿಸುವಲ್ಲಿ ಹಾಗೂ ಕಾರ್ಮಿಕರಿಗೆ ಬಾಕಿ ವೇತನವನ್ನು ಕೂಡಲೇ ದೊರಕುವಂತೆ ಮಾಡಿಕೊಡಬೇಕಾಗಿ ಕೋರಿದರು.
ಎ.ಐ.ಟಿ.ಯು.ಸಿ. ಪ್ರಧಾನ ಕಾರ್ಯದರ್ಶಿ ಬಿ.ಎಂ. ಮಧು, ಉಪಾಧ್ಯಕ್ಷ ಜೆ.ಆರ್. ಸಂತೋಷ್, ಕಾರ್ಯದರ್ಶಿ ಹೆಚ್.ಎಸ್.ಮಂಜೇಗೌಡ, ಖಜಾಂಚಿ ಜೆ.ಸಿ. ಲೋಕೇಶ್ ಮೊದಲಾದವರಿದ್ದರು.
