ಹಾಸನ, ನ.21 — ಕೇಂದ್ರ ಸರ್ಕಾರ ಪ್ರಕಟಿಸಿರುವ ಶ್ರಮ ಶಕ್ತಿ ನೀತಿ–2025 ಕರಡು ರಾಷ್ಟ್ರೀಯ ಕಾರ್ಮಿಕ ಮತ್ತು ಉದ್ಯೋಗ ನೀತಿಗೆ ಸಿಐಟಿಯು ತೀವ್ರ ವಿರೋಧ ವ್ಯಕ್ತಪಡಿಸಿದೆ. “ಶ್ರಮ ಧರ್ಮ” ಎಂಬ ಹೆಸರಿನಲ್ಲಿ ತರಲಾಗಿರುವ ಈ ನೀತಿ, ವಾಸ್ತವದಲ್ಲಿ ಕಾರ್ಮಿಕರ ಮೇಲೆ ಗುಲಾಮಗಿರಿ ಹೇರಿಕೆ ಯತ್ನವಾಗಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಧರ್ಮೇಶ್ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊಸ ನೀತಿಯಿಂದ ಕಾರ್ಮಿಕ ಕಾನೂನು ಮತ್ತು ಆಡಳಿತ ನಿಯಂತ್ರಣವನ್ನು ಶಿಥಿಲಗೊಳಿಸಿ, ದುಡಿಯುವ ಜನರ ಹಕ್ಕುಗಳನ್ನು ದುರ್ಬಲಗೊಳಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು. ಮನುಸ್ಮೃತಿ ಮತ್ತು ಧರ್ಮಶಾಸ್ತ್ರಗಳ ಪ್ರಸ್ತಾಪದ ಮೂಲಕ ಅಸಮಾನತೆಯನ್ನು ಕಾನೂನುಬದ್ಧಗೊಳಿಸುವ ಅಪಾಯಕಾರಿ ಹೆಜ್ಜೆ ಇದು ಎಂದು ಅವರು ವಾಗ್ದಾಳಿ ನಡೆಸಿದರು.
ಧರ್ಮೇಶ್ ಅವರು, ದೇಶದ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿರುವ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕ ಇಲಾಖೆ ತನ್ನ ಅಧಿಕಾರವನ್ನು ಕಳೆದುಕೊಳ್ಳುವ ಅಪಾಯ ಎದುರಿಸಿದೆ ಎಂದು ಸೂಚಿಸಿದರು. ಈ ಹಿನ್ನೆಲೆಯಲ್ಲಿ ನವೆಂಬರ್ 26ರ ಸಂವಿಧಾನ ದಿನದಂದು ಸಿಐಟಿಯು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಘೋಷಿಸಿದರು.
ಇದನ್ನು ಓದಿ: ATM ನಗದು ವ್ಯಾನ್ ದರೋಡೆ 60 ಗಂಟೆಗಳಲ್ಲಿ ಪತ್ತೆ: ₹5.76 ಕೋಟಿ ವಶ – ಮೂವರು ಪ್ರಮುಖ ಆರೋಪಿಗಳ ಬಂಧನ
ಸಿಐಟಿಯು ರಾಜ್ಯ ಸಮ್ಮೇಳನ ಯಶಸ್ವಿ
ನಗರದಲ್ಲಿ ನವೆಂಬರ್ 13ರಿಂದ ಮೂರು ದಿನ ಹಮ್ಮಿಕೊಂಡಿದ್ದ ಸಿಐಟಿಯು 16ನೇ ರಾಜ್ಯ ಸಮ್ಮೇಳನ ಯಶಸ್ವಿಯಾಗಿ ನೆರವೇರಿದೆ. ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ ಧರ್ಮೇಶ್, ಸಮ್ಮೇಳನದಲ್ಲಿ ನಾಡಿನ ಸಾಮಾಜಿಕ–ಆರ್ಥಿಕ–ರಾಜಕೀಯ ಪರಿಸ್ಥಿತಿಗಳ ಕುರಿತು ಚರ್ಚೆಯೊಂದಿಗೆ ಹಲವಾರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಮಿಕರಿಗೆ ₹36,000 ಮಾಸಿಕ ಕನಿಷ್ಠ ವೇತನ, ₹10,000 ಪಿಂಚಣಿ, ಆರೋಗ್ಯ ಹಾಗೂ ಸೇವಾ ಭದ್ರತೆ, ಗುತ್ತಿಗೆ–ಹೊರಗುತ್ತಿಗೆ ನೌಕರರ ಕಾಯಂ ಹಾಗೂ ದಿನಗೂಲಿ ಕಾರ್ಮಿಕರಿಗೆ ಹಕ್ಕು ರಕ್ಷಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಒತ್ತಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಸಮ್ಮೇಳನದಲ್ಲಿ ನೂತನ ರಾಜ್ಯ ಸಮಿತಿಯನ್ನು ರಚಿಸಲಾಗಿದ್ದು, ಎಂ.ಎಸ್. ಮೀನಾಕ್ಷಿ ಸುಂದರಂ ಅಧ್ಯಕ್ಷರಾಗಿ, ಎಸ್. ವರಲಕ್ಷ್ಮಿ ಪ್ರಧಾನ ಕಾರ್ಯದರ್ಶಿಯಾಗಿ, ಧರ್ಮೇಶ್ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಮುಂದುವರಿಯುವ ಪ್ರತಿಭಟನೆಗಳ ಘೋಷಣೆ
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ ಮಾತನಾಡಿ, ಗ್ರಾಪಂ ನೌಕರರ ಬೇಡಿಕೆ ಈಡೇರಿಕೆಗೆ ನವೆಂಬರ್ 29ರಂದು ಮೈಸೂರು ಸಿಎಂ ಮನೆಯ ಮುಂದೆ “ಚಲೋ” ಹೋರಾಟ ನಡೆಯಲಿದೆ ಎಂದು ಹೇಳಿದರು.
ಅದೇ ರೀತಿ, ಅಂಗನವಾಡಿ ನೌಕರರಿಗೆ ಹಾನಿಕಾರಕವಾಗಿರುವ ಎಫ್ಆರ್ಎಸ್ ರದ್ದುಪಡಿಸಿ ಬಾಕಿ ವೇತನ ನೀಡುವಂತೆ ಆಗ್ರಹಿಸಿ, ಡಿಸೆಂಬರ್ 1ರಿಂದ ಕೇಂದ್ರ ಸಚಿವರ ಮನೆ ಮುಂದೆ ಅನಿರ್ದಿಷ್ಟ ಅವಧಿಯ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಖಜಾಂಚಿ ಅರವಿಂದ್, ಮಂಜುಳಾ, ಸೌಮ್ಯ, ಹೊನ್ನೇಗೌಡ ಉಪಸ್ಥಿತರಿದ್ದರು.

[…] ಇದನ್ನು ಓದಿ: ಹಾಸನ: ಶ್ರಮ ಶಕ್ತಿ ನೀತಿ–2025 ಗುಲಾಮಗಿರಿ ಹೇರ… […]