ಹಾಸನ : ನಡೆದಾಡುವ ದೇವರು, ಕಲಿಯುಗ ಬಸವಣ್ಣ, ತ್ರಿವಿಧ ದಾಸೋಹಿ ಎಂದೇ ಖ್ಯಾತಿ ಪಡೆದ ತುಮಕೂರಿನ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಮಹಾಸ್ವಾಮೀಜಿ ಅವರು ಅನ್ನ, ಅಕ್ಷರ ಮತ್ತು ಆಶ್ರಯ ಎಂಬ ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದಾರೆ ಎಂದು ಹಾಸನ ನಗರದ ತಣ್ಣೀರುಹಳ್ಳ ಶ್ರೀಮಠದ ಪರಮಪೂಜ್ಯ ಶ್ರೀ ಶ್ರೀ ವಿಜಯಕುಮಾರ ಮಹಾಸ್ವಾಮೀಜಿ ಹೇಳಿದರು.
ನಗರದ ತಣ್ಣೀರುಹಳ್ಳ ಶ್ರೀಮಠದಲ್ಲಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ ಸಿದ್ದಗಂಗಾ ಶ್ರೀಗಳ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜಾತಿ-ಮತ ಭೇದವಿಲ್ಲದೆ ಅನಾಥ, ಕಡುಬಡ ಮತ್ತು ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಊಟ ಒದಗಿಸುವ ಮೂಲಕ ಸಿದ್ದಗಂಗಾ ಶ್ರೀಗಳು ಸಮಾಜ ಸೇವೆಯಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಅವರ ಸೇವೆ ಲಕ್ಷಾಂತರ ಕುಟುಂಬಗಳ ಬದುಕಿಗೆ ದಾರಿದೀಪವಾಗಿದೆ ಎಂದು ಅವರು ತಿಳಿಸಿದರು.

ಶ್ರೀಮಠದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಸಂದರ್ಭದಲ್ಲಿ ಮಠದ ಆದಾಯ ಅತಿ ಕಡಿಮೆಯಿತ್ತು. ಮಠದ ಭೂಮಿಯೆಲ್ಲ ಮಳೆ ಆಧಾರಿತವಾಗಿದ್ದು, ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಸಂಕಷ್ಟಗಳ ನಡುವೆಯೂ ಶ್ರೀಗಳು ಧೈರ್ಯದಿಂದ ಮಠವನ್ನು ಮುನ್ನಡೆಸಿದರು. ಭಕ್ತರ ಮನೆಗಳಿಂದ ಭಿನ್ನಹ, ದವಸ-ಧಾನ್ಯ ಸಂಗ್ರಹಿಸಿ ವಿದ್ಯಾರ್ಥಿನಿಲಯ, ಪ್ರಸಾದ ನಿಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕು ಹರಿಸಿದರು ಎಂದು ಅವರು ಸ್ಮರಿಸಿದರು.
ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಮಾತನಾಡಿ, ಸಿದ್ದಗಂಗಾ ಶ್ರೀಗಳು ಬಡ, ದೀನದಲಿತರು ಹಾಗೂ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರೊಂದಿಗೆ ಉತ್ತಮ ಮಾನವೀಯ ಮೌಲ್ಯಗಳನ್ನು ಬೋಧಿಸಿ ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅಂಥ ಮಹಾನ್ ಶರಣರ ಆಶ್ರಯದಲ್ಲಿ ಬೆಳೆದ ನಾವೆಲ್ಲರೂ ಪುಣ್ಯವಂತರು ಎಂದು ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ ಮಾತನಾಡಿ, 12ನೇ ಶತಮಾನದ ಶಿವಶರಣರ ಕಾಯಕ ಮತ್ತು ದಾಸೋಹ ಪರಿಕಲ್ಪನೆಯನ್ನು ಆಧುನಿಕ ಯುಗದಲ್ಲಿ ಜೀವಂತಗೊಳಿಸಿದ ಮಹಾನ್ ಶಕ್ತಿ ಪರಮಪೂಜ್ಯ ಸಿದ್ದಗಂಗಾ ಶ್ರೀಗಳಿಗೆ ಸಲ್ಲುತ್ತದೆ. ಅವರ ನಿಸ್ವಾರ್ಥ ಸೇವೆ ಮತ್ತು ಕಾರ್ಯವೈಖರಿಗೆ ಇಡೀ ಜಗತ್ತೇ ತಲೆದೂಗಿದೆ. ಇಂತಹ ಮಹಾಗುರು ನಮ್ಮ ಕಣ್ಣು ಮುಂದೆ ಬದುಕಿದ್ದು ನಮ್ಮೆಲ್ಲರ ಸೌಭಾಗ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಕೋಶಾಧಿಕಾರಿ ರುದ್ರಸ್ವಾಮಿ, ಸಂಘಟನಾ ಕಾರ್ಯದರ್ಶಿ ಅನಂದ್ ಪಟೇಲ್, ಬೇಲೂರು ತಾಲ್ಲೂಕು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಅರಕಲಗೂಡು ಅಧ್ಯಕ್ಷ ಅಮೃತೇಶ್, ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷೆ ಶರಣೆ ಕಲ್ಪನಾ ಸಿದ್ದುರಾಜು, ಬೇಲೂರು ಪ್ರಧಾನ ಕಾರ್ಯದರ್ಶಿ ರಾಜಕುಮಾರ, ಖಜಾಂಚಿ ಧನಂಜಯ, ಸಕಲೇಶಪುರ ಕದಳಿ ಮಹಿಳಾ ವೇದಿಕೆ ಮೀನಾಕ್ಷಿ ಖಾದರ್, ಶಾರದಾ ಗುರುಮೂರ್ತಿ, ಭಾವನಾ, ಕಲಾವತಿ, ಪೂಜಾ, ರತ್ನಮ್ಮ, ಅನ್ನಪೂರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
