ಹಾಸನ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನೇತೃತ್ವದಲ್ಲಿ ಸೌಹಾರ್ದ ಸಹಕಾರ ಕಾಯ್ದೆಯ ರಜತ ಮಹೋತ್ಸವ ಸಂಭ್ರಮ ಮತ್ತು ಸಂಪರ್ಕ ಸಭೆ ಆಯೋಜಿಸಲಾಗುತ್ತಿದೆ ಎಂದು ಅಧ್ಯಕ್ಷ ಜಿ.ನಂಜನಗೌಡ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 121 ವರ್ಷಗಳ ಭವ್ಯ ಇತಿಹಾಸ ಸಹಕಾರ ಚಳುವಳಿಗಿದೆ. ಆಗಿನಿಂದ ಈವರೆಗೂ ಸರ್ವರಿಗೂ ಸಮಬಾಳು, ಸಮಪಾಲು ಆಶಯ ಇಟ್ಟುಕೊಂಡು ಭಾರತ ದೇಶದ ಆರ್ಥಿಕತೆಯ ಸುಭದ್ರತೆಗೆ ತನ್ನದೇ ಆದ ಛಾಪು ಹೊಂದಿದೆ. ಬಡತನ ನಿವಾರಣೆ, ಉದ್ಯೋಗ ಸೃಷ್ಟಿ, ಸಾಮಾಜಿಕ ನ್ಯಾಯಗಳಂತಹ ಕಾರ್ಯಕ್ರಮ ಮಾಡುತ್ತಿದೆ ಎಂದು ವಿವರಿಸಿದರು.
2025 ಜ.1ಕ್ಕೆ ಸಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದು 25 ವರ್ಷಗಳಾಗಿವೆ, ಇದು ರಜತ ಮಹೋತ್ಸವದ ವರ್ಷವಾಗಿದ್ದು, ಇದನ್ನು ಸೌಹಾರ್ದ ಸಹಕಾರಿ ರಜತ ಮಹೋತ್ಸವ ವರ್ಷ ಎಂದು ಆಚರಿಸಲು ನಿರ್ಣಯಿಸಲಾಗಿದೆ ಎಂದರು. ಈ ಅವಧಿಯಲ್ಲಿ ಸರ್ಕಾರದ, ಸಾರ್ವಜನಿಕರ ಹಾಗೂ ಸಹಕಾರಿಗಳ ಮನ್ನಣೆಗಳಿಸಿ ಉತ್ತಮ ಪ್ರಗತಿಯತ್ತ ಮುನ್ನಡೆಯುತ್ತಿದೆ ಎಂದು ಹೇಳಿದರು.
ಪ್ರತಿ ವರ್ಷದಂತೆ ಸಂಯುಕ್ತ ಸಹಕಾರಿ ಸಾಮಾನ್ಯ ಸಭೆಗೂ ಮುನ್ನ ರಾಜ್ಯಾದ್ಯಂತ ಪ್ರವಾಸಿ ಮಾಡಿ ಸಹಕಾರ ಕ್ಷೇತ್ರದ ಜ್ವಲಂತ ವಿಷಯಗಳನ್ನು ಚರ್ಚಿಸುವುದು ಹಾಗೂ ಸಹಕಾರ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸಭೆ ನಡೆಸಲಾಗುತ್ತಿದೆ. ಅದರಂತೆ ಇಂದು ನಗರದಲ್ಲೂ ನಡೆದಿದೆ ಎಂದರು.
.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ತನ್ನ ಶಾಸನ ಬದ್ದ ಕಾರ್ಯಚಟುವಟಿಕೆ ಜೊತೆಗೆ ಸೌಹಾರ್ದ ಸಹಕಾರಿ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜನಸಾಮಾನ್ಯರಲ್ಲಿ ಸೌಹಾರ್ದ ಸಹಕಾರಿ ಕ್ಷೇತ್ರದ ಬಗ್ಗೆ ಒಲವು ಮೂಡಿಸುವ ಸಕಾರಾತ್ಮಕ ಮನೋಭಾವ ಬೆಳೆಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದರು.
ರಜತ ವರ್ಷದ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ನಮ್ಮ ಸಹಕಾರಿಗಳ ಸಂಖ್ಯೆ 6514 ಇದ್ದು, ಶೇರು ಬಂಡವಾಳ 1,630 ಕೋಟಿ ಇದೆ. ಠೇವಣಿ 44,793 ಕೋಟಿ ಇದ್ದು, 35,747 ಕೋಟಿ ಸಾಲ ನೀಡಲಾಗಿದೆ. ಕಾಯ್ದಿಟ್ಟ ನಿಧಿ 3,992 ಕೋಟಿ ಎಂದು ವಿವರಿಸಿದರು. ದುಡಿಯುವ ಬಂಡವಾಳ 51,064 ಕೋಟಿ ಇದ್ದು, 735ಕೋಟಿ ಲಾಭಹೊಂದಿದೆ ಎಂದು ವಿವರಿಸಿದರು.
ಸರ್ಕಾರದ ಆರ್ಥಿಕ ನೆರವು ಪಡೆಯದೆ ತಮ್ಮ ಸದಸ್ಯರ ಹಣದಿಂದಲೇ ಸಹಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ವ್ಯವಹಾರಿಕ ಸ್ವಾತಂತ್ರ ಇದೆ. ಇ-ಸ್ಟಾಂಪಿಂಗ್, ನಿಯಂತ್ರಣಾತ್ಮಕ ಚಟುವಟಿಕೆ, ದಾವಾ ಪಂಚಾಯ್ತಿ ನ್ಯಾಯಾಲಯ, ಸಂಯುಕ್ತ ಸಹಕಾರಿಯ ವೆಬ್ ಸೈಟ್, ಸ್ವಾಭಿಮಾನಿ ಸಹಕಾರಿ ಮಾಸ ಪತ್ರಿಕೆ, ಸಂಯುಕ್ತ ಸಹಕಾರಿಯ ನೇತೃತ್ವದ ಡಿಸಿಬಿಎಂ ಕೋರ್ಸ್ ಮೊದಲಾದ ವ್ಯವಸ್ಥೆ ಅಳವಡಿಸಲಾಗಿದೆ ಎಂದರು.
ನಿರ್ದೇಶಕರಾದ ಮಂಜುನಾಥ ಎಸ್.ಕೆ., ಭಾರತಿ ಜಿ.ಭಟ್ ಇತರರು ಇದ್ದರು.

[…] […]