
ಹಾಸನ :- ಬೇಸಿಗೆ ಆರಂಭವಾಗುತ್ತಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಲು ಆಲೂರು- ಸಕಲೇಶಪುರ ಕ್ಷೇತ್ರದ ಶಾಸಕರ ಸಿಮೆಂಟ್ ಮಂಜು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಾಸನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು ಜೆ.ಜೆ.ಎಂ ಯೋಜನೆಯಡಿ ನಿರ್ವಹಿಸುತ್ತಿರುವ ಪೈಪ್ ಲೈನ್ ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ಕಟ್ಟಾಯ ಗ್ರಾಮಪಂಚಾಯಿತಿಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಸ್ಥಳ ನಿಗದಿಗೆ ಅಡ್ಡಿ ಇರುವ ಸಮಸ್ಯೆಯನ್ನು ಕೂಡಲೇ ಬಗೆಹರಿಸಲು ತಹಶೀಲ್ದಾರ್ ಅವರಿಗೆ ಹೇಳಿದರು.
ಹಾಸನ, ಆಲೂರು, ಮಗ್ಗೆ ನಡುವೆ ಬೆಟ್ಟಳ್ಳಿಗೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲು ಹಾಗೂ ತಣ್ಣೀರುಹಳ್ಳ, ಸಂತೆಪೇಟೆ, ಮುಖಾಂತರ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚಿಸಿದರು.
ಕಬ್ಬತ್ತಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ತಡೆಮಾಡಿದ್ದು, ಶೀಘ್ರವೇ ಟ್ಯಾಂಕ್ ನಿರ್ಮಾಣಕ್ಕೆ ಅನುವು ಮಾಡಿಕೊಡಲು ಅರಣ್ಯಾಧಿಕಾರಿಗಳಿಗೆ ಹೇಳಿದರು.
ಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮುದ್ದನಹಳ್ಳಿ ಸರ್ಕಾರಿ ಜಾಗದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತೊಂದರೆ ನೀಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಂಡು ಕೆಲಸ ಮುಂದುವರಿಸಲು ಪಂಚಾಯಿತಿ ಅಧಿಕಾರಿಗೆ ಸೂಚಿಸಿದರು.
ಬೇಸಿಗೆಯ ಸಮಯದಲ್ಲಿ ನಿಗದಿತ ಕರೆಂಟ್ ನೀಡಿ, ಡಿಸ್ ಕನೆಕ್ಟ್ ಮಾಡಬೇಡಿ ಇದರಿಂದ ರೈತರ ಬೆಳೆ ನಾಶವಾಗುವ ಸಾಧ್ಯತೆ ಇದೆ ಎಂದು ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳಿಗೆ ತಿಳಿಸಿದರು.
ಹಾಸನ ತಾಲ್ಲೂಕು ಪಂಚಾಯಿತಿ ತಹಶೀಲ್ದಾರ್ ಶ್ವೇತಾ ರವೀಂದ್ರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಹೆಚ್.ಡಿ, ಸಹಾಯಕ ನಿರ್ದೇಶಕರಾದ ದಿನೇಶ್ ಸಿ. ಬಿ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.