ಹಾಸನ : ಸರಕಾರಿ ಶಾಲೆಗಳು ಅಭಿವೃದ್ಧಿಯಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ಕೇವಲ ಸರಕಾರಿ ಸೌಲಭ್ಯಗಳಿಂದ ಒಂದು ಶಾಲೆಯ ಭೌತಿಕ ಹಾಗೂ ಬೌಧ್ಧಿಕ ಬೆಳವಣಿಗೆ ಸಾಧ್ಯವಿಲ್ಲ, ಸಮುದಾಯವೂ ಕೈಜೋಡಿಸಿದಾಗ ಗುಣಾತ್ಮಕ ಶಿಕ್ಷಣ ದೊರೆಯಲು ಸಾಧ್ಯ ಎಂದು ಆಲೂರು ತಾಲ್ಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ. ಎಂ. ವರದರಾಜು ಅಭಿಪ್ರಾಯಪಟ್ಟರು.
ಅವರು ಹಾಸನ ತಾಲ್ಲೂಕು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೌಡುವಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಈಗಾಗಲೇ ಸರಕಾರ ಎಲ್ಲಾ ಮಕ್ಕಳಿಗೂ ಸಮವಸ್ತ್ರ, ಕ್ಷೀರ, ಬಿಸಿಯೂಟ, ಪಠ್ಯಪುಸ್ತಕ, ವಿದ್ಯಾರ್ಥಿ ವೇತನ, ಶೂ ಸಾಕ್ಸ್ ಮುಂತಾದ ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಜೊತೆಗೆ ಮಕ್ಕಳ ಕಲಿಕೆಗೆ ಅಗತ್ಯವಿರುವ ನೋಟ್ಸ್, ಲೇಖನ ಸಾಮಾಗ್ರಿಗಳನ್ನು ಸಾಮಾಜಿಕ ಕಾಳಜಿಯುಳ್ಳವರು ಸರಕಾರಿ ಶಾಲಾ ಮಕ್ಕಳಿಗೆ ದೇಣಿಗೆಯಾಗಿ ನೀಡುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.

ಶಾಲಾ ಮುಖ್ಯ ಶಿಕ್ಷಕ ಶಂಕರಾಚಾರ್ ಮಾತನಾಡಿ ನಮ್ಮ ಶಾಲೆಯ ಎಲ್ಲಾ ಮಕ್ಕಳಿಗೂ ಉಚಿತವಾಗಿ ನೋಟ್ ಬುಕ್ಸ್, ಪೆನ್, ಪೆನ್ಸಿಲ್, ಶಾರ್ಪನರ್, ಎರೇಸರ್ ಮುಂತಾದ ಪರಿಕರಗಳನ್ನು ಶಿಕ್ಷಕರೂ, ಶಾಲಾ ಹಿತೈಷಿಗಳೂ ಹಾಗೂ ಆಲೂರು ತಾಲ್ಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಿ.ಎಂ.ವರದರಾಜುರವರ ಕೊಡುಗೆ ಅನನ್ಯವಾದುದು ಎಂದು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಜೆ.ಸಿ. ಚಂದ್ರಕಲಾ, ಆರ್.ಎನ್. ಸರೋಜ, ಅಂಗನವಾಡಿ ಕಾರ್ಯಕರ್ತೆ ಲೋಲಾಕ್ಷಿ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.
