ಹಾಸನ, ನವೆಂಬರ್ 5: ನಗರದ AVK ಕಾಲೇಜ್ ರಸ್ತೆಯಲ್ಲಿ ಸಂಚಾರಿ ನಿಯಮ ಪಾಲನೆಗೆ ಜಾಗೃತಿ ಮೂಡಿಸುತ್ತಿದ್ದ ಸಂಚಾರಿ ವೃತ್ತ ನಿರೀಕ್ಷಕರಾದ ದಯಾನಂದ್ ಹಾಗೂ ಅವರ ತಂಡ ನಿನ್ನೆ ರಾತ್ರಿ ಮಾದರಿ ಘಟನೆಯೊಂದನ್ನು ರೂಪಿಸಿದ್ದಾರೆ.
ಸಂಚಾರಿ ನಿಯಮ ಉಲ್ಲಂಘಿಸಿ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುತ್ತಿದ್ದ ವಿದ್ಯಾರ್ಥಿಯೊಬ್ಬರನ್ನು ತಡೆದು, ದಂಡ ವಿಧಿಸುವ ಬದಲು ಮಾನವೀಯ ರೀತಿಯಲ್ಲಿ ಪಾಠ ಕಲಿಸಿದ ಅಧಿಕಾರಿಗಳು ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಿದ್ಯಾರ್ಥಿಗೆ ಅವರು, “ನಿಮ್ಮ ಸುರಕ್ಷತೆಗಾಗಿ, ನಿಮ್ಮನ್ನು ನಂಬಿದ ಕುಟುಂಬಕ್ಕಾಗಿ ಹೆಲ್ಮೆಟ್ ಧರಿಸಬೇಕು” ಎಂದು ಮನವರಿಕೆ ಮಾಡಿದರು. ತಮ್ಮ ತಪ್ಪಿನ ಬಗ್ಗೆ ಅರಿವಾದ ವಿದ್ಯಾರ್ಥಿ ಕೂಡಲೇ ಹೊಸ ಹೆಲ್ಮೆಟ್ ಖರೀದಿಸಿ, ಕ್ಷಮೆ ಯಾಚಿಸಿ, ಮುಂದಿನ ದಿನಗಳಲ್ಲಿ ನಿಯಮ ಪಾಲನೆ ಮಾಡುವುದಾಗಿ ಭರವಸೆ ನೀಡಿದರು.
ಇದನ್ನು ಓದಿ: ಫೆಡರಲ್ ಬ್ಯಾಂಕ್ ಹಾರ್ಮಿಸ್ ಸ್ಮಾರಕ ಪ್ರತಿಷ್ಠಾನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಅವರ ಪ್ರಾಮಾಣಿಕ ನಡೆಗೆ ಮೆಚ್ಚಿದ ದಯಾನಂದ್ ರವರು, ವಿದ್ಯಾರ್ಥಿಯ ವಾಹನವನ್ನು ಬಿಡುಗಡೆ ಮಾಡಿ, “ನಿಯಮ ಪಾಲನೆ ನಿಮ್ಮ ಜೀವದ ರಕ್ಷಣೆಗಾಗಿ” ಎಂದು ತಿಳಿಹೇಳಿದರು.
ಸಾಮಾನ್ಯವಾಗಿ ಸಂಚಾರಿ ಪೊಲೀಸರು ಹಣಕ್ಕಾಗಿ ವಾಹನ ತಡೆದು ದಂಡ ವಿಧಿಸುತ್ತಾರೆ ಎಂಬ ಜನರ ಅಭಿಪ್ರಾಯದ ನಡುವೆ, ದಯಾನಂದ್ ರವರ ಈ ನಡೆ ಮಾನವೀಯತೆಗೂ ಕರ್ತವ್ಯನಿಷ್ಠೆಗೂ ಆದರ್ಶ ಉದಾಹರಣೆಯಾಗಿದೆ.
ಸಾರ್ವಜನಿಕರು, “ನಮ್ಮ ಜಿಲ್ಲೆಯಲ್ಲಿ ಇಂತಹ ನಿಷ್ಕಲ್ಮಶ ಅಧಿಕಾರಿಗಳು ಇರುವುದೇ ನಮ್ಮ ಸೌಭಾಗ್ಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

[…] […]