ಹಾಸನ: ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಅಧ್ಯಕ್ಷ ಸ್ಥಾನವನ್ನು ಹಾಸನ ವಿಧಾನಸಭಾ ಕ್ಷೇತ್ರದವರಿಗೇ ನೀಡಬೇಕೆಂದು ನಿಡುಗರಹಳ್ಳಿ ಸಿದ್ದಪ್ಪ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗೌಡಗೆರೆ ಪ್ರಕಾಶ್ ಅವರು ಹಿಂದೆ ಎ.ಪಿ.ಎಂ.ಸಿ ಅಧ್ಯಕ್ಷರಾಗಿದ್ದರು 30 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿ ದೆಸೆಯಿಂದಲೂ ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತಿರುವ ಅವರಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಜನಪರ ಚಟುವಟಿಕೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ, ಪ್ರಕಾಶ್ ಅವರನ್ನು ಹುಡಾ ಅಧ್ಯಕ್ಷರನ್ನಾಗಿ ಮಾಡಿದರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಬಲವರ್ಧನೆಗೆ ಅನುಕೂಲ ಆಗಲಿದೆ ಎಂದರು. ಹುಡಾ ಅಧ್ಯಕ್ಷ ಹುದ್ದೆ ಹಾಸನ ಕ್ಷೇತ್ರಕ್ಕಷ್ಟೇ ಸಿಮೀತವಾಗಿದೆ, ಹಾಗಾಗಿ ಪ್ರಕಾಶ ಗೌಡಗೆರೆ ಅವರಿಗೆ ಮಣೆ ಹಾಕಬೇಕು ಎಂದರು.
ಅರಸೀಕೆರೆ ಅಥವಾ ಬೇರೆ ವಿಧಾನಸಭಾ ಕ್ಷೇತ್ರಗಳ ಮುಖಂಡರಿಗೆ ಅವಕಾಶ ನೀಡಿದರೆ ಏನೂ ಪ್ರಯೋಜನ ಆಗದು. ಬೇರೆ ಕ್ಷೇತ್ರದವರನ್ನು ಇಲ್ಲಿಗೆ ತರುವ ಕೆಲಸ ಮಾಡಬೇಡಿ. ಗೃಹ ಮಂಡಳಿ ಅಧ್ಯಕ್ಷರೂ ಆದ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರು, ಸಂಸದ ಶ್ರೇಯಸ್ ಪಟೇಲ್ ಅವರಿಗೆ ಎಲ್ಲ ವಿಚಾರಗಳು ತಿಳಿದಿವೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಅವರಿಗೂ ತಿಳಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಸಿ.ಎಂ ಡಿ.ಕೆ.ಶಿವಕುಮಾರ ಅವರು ಹಾಸನ ವಿಧಾನಸಭಾ ಕ್ಷೇತ್ರದವರೇ ಆದ ಪ್ರಕಾಶ್ ಗೌಡಗೆರೆ ಅವರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಹೈಕಮಾಂಡ್ ಸಹ ಪ್ರಕಾಶ್ ಪರವಾದ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಸ್ವಾಮಿಗೌಡ, ಸಣ್ಣೇಗೌಡ ಇದ್ದರು.
