ಹಾಸನ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಯನ್ನು ಹಾಸನ ವಿಧಾನಸಭಾ ಕ್ಷೇತ್ರದವರಿಗೇ ನೀಡಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಹುಡಾವರೆಗೆ ಮೆರವಣಿಗೆ ನಡೆಸಿದ ನೂರಾರು ಮಂದಿ ಮುಖಂಡರು, ಕಾರ್ಯಕರ್ತರು, ಹಾಸನ ವಿಧಾನಸಭಾ ಕ್ಷೇತ್ರದವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಎಂದು ಒತ್ತಾಯಿಸಿದರು.
ಹೊರಗಿನವರಿಗೆ ಮಣೆ ಹಾಕಿದರೆ ಅವರಿಗೆ ನಗರದ ಅಭಿವೃದ್ಧಿ ಹಾಗೂ ಜನರ ಹಿತಕ್ಕೆ ಅವರ ಸ್ವ ಅಭಿವೃದ್ಧಿಯೇ ಮುಖ್ಯವಾಗುತ್ತದೆ. ಪಕ್ಷ ಸಂಘಟನೆಗೂ ತೊಂದರೆ ಆಗಲಿದೆ ಎಂದು ಎಚ್ಚರಿಸಿದರು.
ಈ ವೇಳೆ ಮಾತನಾಡಿದ ಯುವ ಮುಖಂಡ ಚಂದ್ರು, ಕಳೆದ ಹಲವು ವರ್ಷಗಳಿಂದ ಹಾಸನದಲ್ಲಿ ಪಕ್ಷ ಸಂಘಟನೆಗಾಗಿ ದುಡಿದಿರುವ ಹೆಚ್.ಕೆ.ಮಹೇಶ್ ಸೇರಿದಂತೆ ಸಾಕಷ್ಟು ಮಂದಿ ಇದ್ದಾರೆ. ಯಾರೇ ಆಗಲಿ ಸ್ಥಳೀಯರಿಗೆ ಮಾತ್ರ ಆದ್ಯತೆ ಕೊಡಿ ಎಂದು ಒತ್ತಾಯಿಸಿದರು. ಇವರಿಗೆ ಬೂತ್ ಮಟ್ಟದ ಕಾರ್ಯಕರ್ತರು, ಮುಖಂಡರು ಗೊತ್ತಿರುತ್ತಾರೆ. ಆದರೆ ಹಾಲಿ ಚಾಲ್ತಿಯಲ್ಲಿರುವ ಪಟೇಲ್ ಶಿವಪ್ಪ, ಪ್ರಸನ್ನ ಮೊದಲಾದವರಿಗೆ ಮಣೆ ಹಾಕಿದರೆ, ಅವರಿಗೆ ಬೂತ್ ಪರಿಚಯ ಸೇರಿದಂತೆ ಯಾರೂ ಗೊತ್ತಿಲ್ಲ. ಹೀಗಾದರೆ ಪಕ್ಷ ಸಂಘಟನೆಯೂ ಆಗುವುದಿಲ್ಲ ಎಂದು ಎಚ್ಚರಿಸಿದರು.
ಕೆಲವರು ಅಧಿಕಾರ ಪಡೆಯುವುದಕ್ಕಾಗಿ ಅನೇಕ ರೀತಿಯ ಸುಳ್ಳು ಹೇಳುತ್ತಾರೆ. ರಾಜ್ಯ ನಾಯಕರು ಪ್ರತಿಯೊಂದನ್ನೂ ಪರಿಗಣಿಸಬೇಕು. ನಿμÁ್ಠವಂತ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮನ್ನಣೆ ನೀಡುವಂತೆ ಮನವಿ ಮಾಡಿದರು. ನಮ್ಮೆಲ್ಲರ ಆಶೋತ್ತರಗಳಿಗೆ ಸ್ಪಂದಿಸದೇ ಇದ್ದರೆ, ನಾವೂ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ರಂಗಸ್ವಾಮಿ, ಪ್ರಸನ್ನ, ಪರಶುರಾಂ, ರಾಜೇಶ್, ಆರೀಫ್ ಖಾನ್ ಮೊದಲಾದವರಿದ್ದರು.

[…] ಹಾಸನ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್… […]
[…] ಹಾಸನ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್… […]