ಹಾಸನ: ಜಿಲ್ಲೆಯಲ್ಲಿ ಆತಂಕ ಹುಟ್ಟಿಸಿರುವ ಸರಣಿ ಹೃದಯಾಘಾತ ದುರಂತ ಪ್ರಕರಣವನ್ನು ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಆಗ್ರಹಿಸಿದ್ದಾರೆ.
ಹಠಾತ್ ಹೃದಯಾಘಾತದಿಂದ ನಿತ್ಯ ಸಾವು ಸಂಭವಿಸುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರಾಗಲೀ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರಾಗಲೀ ಅಥವಾ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರಾಗಲೀ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ-ಸೂಚನೆ ನೀಡದೇ ಇರುವುದು ದುರದೃಷ್ಟಕರ ಎಂದಿದ್ದಾರೆ.
ಇದನ್ನು ಓದಿ: ‘ಹೃದಯಾಘಾತ’ ಎಂಬ ಮೌನ ಮಹಾಮಾರಿ ಬಗ್ಗೆ ಬೇಡ ಆತಂಕ – ❤️ ಇರಲಿ ಎಚ್ಚರ
ಉಸ್ತುವಾರಿ ಸಚಿವರು ನನಗೆ ಹಾಸನದ ಜವಾಬ್ದಾರಿ ಬೇಡ ಎಂದು ಈ ಹಿಂದೆಯೇ ಹೇಳಿರುವುದರಿಂದ ಅವರಿಗೆ ಹಾಸನ ಜಿಲ್ಲೆ ಬೇಡವಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಜಾಣಮೌನ ವಹಿಸಿರುವುದು ಖಂಡನೀಯ.
ರಾಜಣ್ಣ ಅವರಿಗೆ ಹಾಸನ ಜಿಲ್ಲೆಯಲ್ಲಿ ಕೆಲಸ ಮಾಡುವಂತೆ ಸೂಚಿಸಬೇಕು ಇಲ್ಲವೇ ಬೇರೊಬ್ಬರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು. ಈವರೆಗೂ ಅದಾವುದನ್ನೂ ಮಾಡದೆ ಜಿಲ್ಲೆಯ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ದೂರಿದ್ದಾರೆ.
ಈವರೆಗೆ 20 ವರ್ಷದೊಳಗಿನ 4 ಯುವ ಜನರು ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹಾಗೆಯೇ 20 ರಿಂದ 50 ವರ್ಷದ ನಡುವಿನ 14 ಜನ, 50 ವರ್ಷ ಮೇಲ್ಪಟ್ಟ 14 ಜನರು ದಿಢೀರ್ ಹೃದಯಾಘಾತದಿಂದ ಜೀವ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೇವಲ 43 ದಿನಗಳ ಅಂತರದಲ್ಲಿ 32 ಜನರು ಮೃತಪಟ್ಟಿರುವುದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.
ಮನೆಯ ಆಧಾರಸ್ತಂಭ ಅಥವಾ ಬಾಳಿ ಬದುಕಬೇಕಾದ ಮಕ್ಕಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಗಳನ್ನು ಸಂತೈಸುವುದು ಯಾವುದೇ ಸರ್ಕಾರದ ಮೊದಲ ಕರ್ತವ್ಯ, ಆದರೆ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವರು ಕೇವಲ ಬಾಯಿ ಮಾತಿನಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇನ್ನಾದರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಪಟ್ಟ ಸಚಿವರು ಜಿಲ್ಲೆಗೆ ಆಗಬೇಕೆಂದು ಎಂದು ಪತ್ರಿಕಾ ಹೇಳಿಕೆ ಮೂಲಕ ರಘು ಒತ್ತಾಯಿಸಿದ್ದಾರೆ.

[…] ಇದನ್ನು ಓದಿ: ಹಾಸನ:ಜಿಲ್ಲೆಯಲ್ಲಿ ಆತಂಕ ಹುಟ್ಟಿಸಿರುವ ಸರ… […]