ಬೇಲೂರು:ಐತಿಹಾಸಿಕ ಬೇಲೂರಿನ ಗಣೇಶ ವಿಗ್ರಹಕ್ಕೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ವಿಜಯನಗರ ಬಡಾವಣೆಯ ಮಹಿಳೆ ಲೀಲಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕ ಮೊಹಮದ್ ಸುಜೀತಾ ಅವರು ಮಾಹಿತಿ ನೀಡಿದ್ದು, ನಿನ್ನೆ ರಾತ್ರಿ ಸುಮಾರು 8.30 ಕ್ಕೆ ಆರೋಪಿ ಮಹಿಳೆ ಹಾಸನದಿಂದ ಬಸ್ ಹತ್ತಿ ಬೇಲೂರು ಕಡೆ ಪ್ರಯಾಣಿಸಿದ್ದಾರೆ. ನಂತರ ಅಲ್ಲಿಂದ ಚಿಕ್ಕಮಗಳೂರಿಗೆ ತೆರಳಿ ಮತ್ತೆ ಬೇಲೂರಿಗೆ ವಾಪಸ್ಸಾಗಿದ್ದಾರೆ. ಬೇಲೂರಿನಲ್ಲಿ ಇಳಿದ ಬಳಿಕ ಪುರಸಭೆ ಆವರಣದ ಕಡೆಗೆ ತೆರಳಿ, ಬಳಿಕ ದೇವಾಲಯಕ್ಕೆ ಭೇಟಿ ನೀಡಿ ಮರಳಿ ಹಾಸನಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.
ಮಹಿಳೆಯ ಸಂಪೂರ್ಣ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂದಿನ ಬೆಳಿಗ್ಗೆ ವಿಜಯನಗರದಲ್ಲಿರುವ ಆಕೆಯ ಮನೆಯಿಂದಲೇ ಅವರನ್ನು ವಶಕ್ಕೆ ಪಡೆಯಲಾಗಿದೆ.
“ಮಹಿಳೆ ಮಾನಸಿಕವಾಗಿ ಸ್ಥಿರಳಲ್ಲ ಎಂಬ ಮಾಹಿತಿ ನಮ್ಮ ಬಳಿ ಬಂದಿದೆ. ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ,” ಎಂದು ಎಸ್ಪಿ ಸುಜೀತಾ ತಿಳಿಸಿದ್ದಾರೆ.
ಈ ಹಿಂದೆ ಮನೆಯಲ್ಲಿಯೂ ಮಹಿಳೆ ಇದೇ ರೀತಿಯ ವರ್ತನೆ ತೋರಿದ್ದ ಬಗ್ಗೆ ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಸಂಪೂರ್ಣ ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
