ಹಾಸನ : ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿ ಬಂದೂರು ಗ್ರಾಮದಲ್ಲಿ ಮಹಿಳೆಯೊಬ್ಬರ ಬರ್ಬರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಕೊಲೆಯಾದ ಮಹಿಳೆ ಮೀನಾಕ್ಷಮ್ಮ (45). ಗ್ರಾಮದಲ್ಲಿಯೇ ಮನೆ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದ ಅವರು, ಇತ್ತೀಚೆಗೆ ತಮ್ಮ ಮನೆಯ ಹೊಸ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಗ್ರಾಮದ ಅಪ್ರಾಪ್ತನೊಬ್ಬನೊಂದಿಗೆ ವೈಮನಸ್ಯ ಉಂಟಾಗಿತ್ತು.
ಮೀನಾಕ್ಷಮ್ಮ ಅವರ ಮನೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಅಪ್ರಾಪ್ತನಿಗೆ ಬಾಲ್ಯದಲ್ಲೇ ತಂದೆ-ತಾಯಿ ಮೃತಪಟ್ಟಿದ್ದರಿಂದ ಆತ ತಬ್ಬಲಿಯಾಗಿ ಬದುಕು ನಡೆಸುತ್ತಿದ್ದನು.
ಸೆಪ್ಟೆಂಬರ್ 15 ರಂದು ಇಬ್ಬರ ನಡುವೆ ಜಗಳ ತೀವ್ರಗೊಂಡು ವಿಕೋಪಕ್ಕೆ ತಿರುಗಿತು. ಕೋಪಗೊಂಡ ಅಪ್ರಾಪ್ತನು ಕಲ್ಲಿನಿಂದ ಮೀನಾಕ್ಷಮ್ಮ ಅವರ ತಲೆಗೆ ಹೊಡೆದು ಸ್ಥಳದಲ್ಲೇ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ.
ಈ ಕೊಲೆ ಗ್ರಾಮದಲ್ಲಿನ ಪವನ ಎಂಬುವವರ ತೋಟದಲ್ಲಿ ನಡೆದಿದೆ.
ಸೆಪ್ಟೆಂಬರ್ 16 ರಂದು ಮೀನಾಕ್ಷಮ್ಮ ಅವರ ಪುತ್ರ ದಿನೇಶ್, ತಾಯಿಯ ಸಾವು ಅನುಮಾನಾಸ್ಪದವಾಗಿದೆ ಎಂದು ಜಾವಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ತನಿಖೆ ನಡೆಸಿದ ಪೊಲೀಸರು, ದಿನೇಶ್ ನೀಡಿದ ಮತ್ತೊಂದು ದೂರು ಆಧಾರವಾಗಿ ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅಪ್ರಾಪ್ತನು ಕೊಲೆ ಎಸಗಿರುವುದಾಗಿ ಒಪ್ಪಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಾಂಶ ಬೆಳಕಿಗೆ ಬಂದಿದೆ.
ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
