ಹಾಸನ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆ ಚಿಕಿತ್ಸೆ ವೇಳೆ ಮೃತಪಟ್ಟ ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತೆಯ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.
ತಾಲ್ಲೂಕಿನ ಹನುಮನಹಳ್ಳಿ ನಿವಾಸಿಯಾಗಿದ್ದ ಹಾಗೂ ಪ್ರಸ್ತುತ ಕೆ.ಆರ್.ಪೇಟೆ ಸಮೀಪದ ಚಿಕ್ಕಗಾಡೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶೃತಿ (30) ಮೃತಪಟ್ಟ ಮಹಿಳೆ. ಇವರು ಕೆ.ಆರ್.ಪೇಟೆ ಡಿಪೋದಲ್ಲಿ ಬಸ್ ಚಾಲಕರಾಗಿರುವ ಪುನೀತ್ ಅವರ ಪತ್ನಿಯಾಗಿದ್ದರು.

ಶೃತಿ ಅವರನ್ನು ಫೆಬ್ರವರಿ 22ರಂದು ಹೆರಿಗೆಗಾಗಿ ನಗರದ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್)ನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸಾಮಾನ್ಯ ಹೆರಿಗೆ ನಡೆದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಹೆರಿಗೆ ಬಳಿಕ ಮಹಿಳೆಯ ಆರೋಗ್ಯ ಏಕಾಏಕಿ ಹದಗೆಟ್ಟಿದ್ದು, ತಕ್ಷಣ ರಕ್ತದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾಗಿ ಕುಟುಂಬಸ್ಥರು ಹೇಳಿದ್ದಾರೆ.
ಸಂಬಂಧಿಕರು ತಕ್ಷಣವೇ ರಕ್ತದ ವ್ಯವಸ್ಥೆ ಮಾಡಿಕೊಟ್ಟಿದ್ದರೂ, ನಂತರ ಮಹಿಳೆಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚನೆ ನೀಡಿದರು. ಆದರೆ ಮಾರ್ಗಮಧ್ಯೆ ಶೃತಿ ಮೃತಪಟ್ಟಿದ್ದಾರೆ ಎಂದು ಪತಿ ಪುನೀತ್ ಆರೋಪಿಸಿದ್ದಾರೆ. ಪ್ರಸೂತಿ ತಜ್ಞೆ ಸುಮಾ ಅವರು ಹೆರಿಗೆ ಮಾಡಿಸಿದ್ದರೂ, ನಂತರ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿರುವುದರಿಂದಲೇ ಶೃತಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯ ಹಿನ್ನೆಲೆಯಲ್ಲಿ ಮೃತೆಯ ಪತಿ ಹಾಗೂ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ, ಸಂಬಂಧಪಟ್ಟ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಇನ್ನೊಂದೆಡೆ, ನವಜಾತ ಹೆಣ್ಣು ಮಗು ಹಿಮ್ಸ್ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ಸಂಬಂಧ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಮೃತೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಸಂಬಂಧಿಕರು ಕಣ್ಣೀರಿನಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
