ಹಾಸನ: ಮೊಬೈಲ್ ವಿಚಾರಕ್ಕೆ ನಡೆದ ಚಿಕ್ಕ ಜಗಳವೇ ಕೊನೆಗೆ ರಕ್ತಪಾತಕ್ಕೆ ಕಾರಣವಾದ ಘಟನೆ ಹಾಸನ ತಾಲ್ಲೂಕಿನ ಯರೇಹಳ್ಳಿ ಗ್ರಾಮದ ಬಳಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಭೀತಿಯ ಅಲೆ ಎಬ್ಬಿಸಿದೆ.
ಮೃತನನ್ನು ಹಾಸನ ನಗರದ ದೊಡ್ಡಮಂಡಿಗನಹಳ್ಳಿಯ ನಿವಾಸಿ ಅಂಕಿತ್ (26) ಎಂದು ಗುರುತಿಸಲಾಗಿದೆ. ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಂಕಿತ್, ನಿನ್ನೆ ರಾತ್ರಿ ಬೈಕ್ನಲ್ಲಿ ರಾಗಿಮುದ್ದನಹಳ್ಳಿ ಗ್ರಾಮದ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದಾನೆ.
ಅಂಕಿತ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಹಲವಾರು ಬಾರಿ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ನೇಹಿತರು ಕರೆದ ಕಾರಣಕ್ಕೆ ಮನೆಯಿಂದ ಹೊರಟಿದ್ದ ಅಂಕಿತ್, ಮರುಳಿ ಶವವಾಗಿ ಹಿಂತಿರುಗಿದ ಘಟನೆ ಕುಟುಂಬದವರಲ್ಲಿ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ.
ಜೊತೆಯಲ್ಲಿದ್ದ ಸ್ನೇಹಿತರಿಂದಲೇ ಕೊಲೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಹಬ್ಬದ ಸಂಭ್ರಮದ ನಡುವೆ ನಡೆದ ಈ ಕ್ರೂರ ಹತ್ಯೆ ಹಾಸನದಲ್ಲಿ ಸಾರ್ವಜನಿಕರ ಚರ್ಚೆಯ ವಿಷಯವಾಗಿದೆ.
