ಹಾಸನ: ಯುವಜನತೆ ದುಶ್ಚಟಗಳಿಂದ ದೂರವಿದ್ದು, ಜೀವನ ಕೌಶಲ್ಯ ವೃದ್ದಿಗೊಳಿಸಿಕೊಂಡು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಸನ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಗಂಧದ ಕೋಠಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವ್ಯಸನ ಮುಕ್ತ ದಿನಾಚರu ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವ ಪೀಳಿಗೆಗೆ ಸಹಜವಾಗಿ ಕುತೂಹಲ ಇರುತ್ತದೆ ಆದರೆ ಸ್ನೇಹಿತರೊಂದಿಗೆ ಬೆರೆತು ಯಾವುದೇ ಪ್ರಯೋಗಗಳನ್ನು ಮಾಡಲು ಪ್ರಯತ್ನಿಸಬೇಡಿ ಎಂದು ತಿಳಿಸಿದರು.
ಕುತೂಹಲಕ್ಕೆ ಒಮ್ಮೆ ನೋಡುತ್ತೇನೆ ನಂತರ ಮನಸ್ಸು ನಿಗ್ರಹಿಸುತ್ತೇನೆ ಎಂದು ಕೊಂಡರೆ ಅದುತಪ್ಪು, ಚಟಗಳು ನರಕಕ್ಕೆ ಬಾಗಿಲು ಇದ್ದಂತೆ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕಿದೆ ಎಂದರಲ್ಲದೆ, ಉದಾತ್ತ ಗುರಿಯನ್ನಿಟ್ಟುಕೊಂಡು ದೇಶಕ್ಕೆ ತಮ್ಮದೆ ಆದ ಕೊಡುಗೆ ನೀಡಲು ಸರಿಯಾದ ಮಾರ್ಗ ಆಯ್ಕೆ ಮಾಡಿಕೊಂಡು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಯುವಜನತೆ ಕೆಟ್ಟ ವ್ಯಸನಗಳಿಗೆ ಬಲಿಯಾಗದೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಮೂಲಕ ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತೆ ತಿಳಿಸಿದರು.
ಡಾ.ಮಹಾಂತ ಶಿವಯೋಗಿಗಳು ಜನರಿಂದ ಯಾವುದೇ ದವಸ, ಧಾನ್ಯ, ನಗದು ಕೇಳಲ್ಲಿಲ್ಲ ಜನರಲ್ಲಿರುವ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿ ಎಂದು ಮನೆ ಮನೆ ಬಾಗಿಲಿಗೆ ಹೋಗಿ ಕೇಳಿಕೊಂಡು ಜನರ ಮನವೊಲಿಸಿ ಕೆಟ್ಟ ಚಟಗಳಿಂದ ದೂರವಿರುವಂತೆ ಮನಃ ಪರಿವರ್ತನೆ ಮಾಡುತ್ತಾ ಸಾಗಿದ ಮಹಾತ್ಮಾರು. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಇವರ ದಾರಿಯಲ್ಲಿ ಎಲ್ಲ್ಲರೂ ನಡೆಯೋಣ ಎಂದರು.
ದುರಭ್ಯಾಸಗಳಿಂದ ದೂರವಿರುವುದಾಗಿ ಪ್ರತಿಜ್ಞೆ ಮಾಡಿ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿ ಆಗುವಂತೆ ಆಟೋಟಗಳಲ್ಲಿ ತೊಡಗಿಕೊಳ್ಳಿ ಎಂದು ತಿಳಿಸಿದರಲ್ಲದೆ, ಧೂಮಪಾನ ಮತ್ತು ಮದ್ಯಪಾನದ ಜೊತೆಗೆ ಮೊಬೈಲ್ ಬಳಕೆ ಕೂಡ ಒಂದು ವ್ಯಸನವಾಗಿದೆ ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಕಡಿವಾಣ ಹಾಕಿ ಓದಿಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಹಿಮ್ಸ್ನ ಮನೋ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ|| ಸಂತೋಷ್.ಎನ್.ವಿ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಹೆಣ್ಣು-ಗಂಡು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಒಳಾಗಾಗಿ ದೈಹಿಕ, ಮಾನಸಿಕ, ಆರ್ಥಿಕ, ಸಾಮಾಜಿಕವಾಗಿ ತೊಂದರೆಗೆ ಸಿಲುಕಿ ನಲುಗುತ್ತಿರುವ ಯುವ ಜನತೆ ಎಚ್ಚೆತ್ತುಕೊಂಡು ವ್ಯಸನಗಳನ್ನು ಬಿಡಲು ಮೊದಲು ಮನಸ್ಸು ಮಾಡಬೇಕು ಎಂದು ಹೇಳಿದರು.
ಸ್ನೇಹಿತರೊಂದಿಗೆ ಖುಷಿಗೆ ಎಂದು ಪ್ರಾರಂಭವಾಗುವ ಕೆಟ್ಟ ಹವ್ಯಾಸಗಳು ಮುಂದೆ ಅವುಗಳನ್ನು ಬಿಡದಂತ ಚಟಗಳಾಗಿ ರೂಪಗೊಂಡು ದುಷ್ಪರಿಣಾಮ ಬೀರುತ್ತವೆ, ತಂಬಾಕು ಸೇವನೆ ಮಾಡುತ್ತಿರುವವರು ಜಗತ್ತಿನಲ್ಲಿ ಹೆಚ್ಚು ಮಾನಸಿಕ ತೊಂದರೆಗೆ ಸಿಲುಕಿದ್ದಾರೆ. ಅತಿಯಾದ ಬೇಜಾರು, ಖುಷಿ, ಅನುಮಾನ, ಸಿಟ್ಟು, ಗಾಬರಿ ಇವುಗಳು ಕೂಡ ವ್ಯಸನಗಳೇ ಇದಕ್ಕೆಲ್ಲಾ ಚಿಕೆತ್ಸೆ ಇದೆ ಎಂದು ತಿಳಿಸಿದರು.
ಎ.ಪಿ.ಎಲ್.ಕಾರ್ಡ್ ಇರುವವರು ಶೇ.30ರಷ್ಟು ಹಣ ಪಾವತಿ ಮಾಡಬೇಕು. ಬಿ.ಪಿ.ಎಲ್ ಕಾರ್ಡ್ ಇರುವವರಿಗೆ ಹಿಮ್ಸ್ನಲ್ಲಿ ಉಚಿತ ಚಿಕಿತ್ಸೆ ಇದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹದಿಹರೆಯದಲ್ಲಿ ಹಾರ್ಮೋನ್ಗಳ ಬದಲಾವಣೆಯಿಂದ ಕೆಟ್ಟ ಕುತೂಹಲ ಮೂಡುವುದು ಸಹಜ ಆದರೆ ಯುವಜನತೆ ಎಚ್ಚರವಹಿಸಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಚಂದ್ರಮೌಳಿ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ತಿಮ್ಮೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.
