ಹಾಸನ, ಅ.21: ಹಾಸನಾಂಬ ದೇವಿಯ ಸಾರ್ವಜನೀನ ದರ್ಶನಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿರುವ ವೇಳೆ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಭಕ್ತರಿಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ಇಂದು ಸಂಜೆ ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ ಮಾತನಾಡಿದ ಅವರು, “ಬುಧವಾರ (ಅ.22) ಬೆಳಿಗ್ಗೆ 5.30ರಿಂದ ಸಂಜೆ 7ರವರೆಗೆ ದರ್ಶನ ತಡೆರಹಿತವಾಗಿ ನಡೆಯಲಿದೆ. ಮಧ್ಯಾಹ್ನ ನೈವೇದ್ಯ ಪೂಜೆ ಇರುವುದಿಲ್ಲ. ಹಾಗಾಗಿ ದಿನವಿಡೀ ಯಾವುದೇ ಅಡೆತಡೆ ಇಲ್ಲದೆ ದರ್ಶನ ಮುಂದುವರಿಯುತ್ತದೆ,” ಎಂದು ತಿಳಿಸಿದರು.
ಸಂಜೆ 7 ಗಂಟೆಗೆ ಸಾರ್ವಜನಿಕ ದರ್ಶನವನ್ನು ನಿಲ್ಲಿಸಲಾಗುವುದು ಎಂದು ಅವರು ಹೇಳಿದರು. “ದರ್ಶನ ಪಡೆಯಬಯಸುವ ಭಕ್ತರು ಸಂಜೆ 5 ಗಂಟೆಯೊಳಗೆ ದೇವಸ್ಥಾನಕ್ಕೆ ಆಗಮಿಸುವಂತೆ ವಿನಂತಿಸುತ್ತೇವೆ. ಗುರುವಾರ ಸಾರ್ವಜನಿಕರಿಗೆ ದೇವಾಲಯ ಪ್ರವೇಶ ಇರೋದಿಲ್ಲ,” ಎಂದು ಸಚಿವರು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಭಕ್ತರ ಸುರಕ್ಷತೆಗಾಗಿ ಎಲ್ಲಾ ಇಲಾಖೆಗಳ ಸಹಕಾರದಿಂದ ಪೂರ್ಣ ಸಿದ್ಧತೆ ಕೈಗೊಳ್ಳಲಾಗಿದೆ. ಹಾಸನಾಂಬ ದರ್ಶನಕ್ಕಾಗಿ ಸಾವಿರಾರು ಭಕ್ತರು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುತ್ತಿದ್ದು, ದೇವಾಲಯ ಮತ್ತು ನಗರ ಪ್ರದೇಶಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ.
