ಹಾಸನ, ಅಕ್ಟೋಬರ್ 8: ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಗಣ್ಯರು ಹಾಗೂ ಅತಿ ಗಣ್ಯರು (ವಿಐಪಿ–ವಿವಿಐಪಿ) ನಿಗದಿತ ಸಮಯದಲ್ಲೇ ದರ್ಶನ ಪಡೆಯಬೇಕು, ಇಲ್ಲವಾದರೆ ಅವರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗೋಲ್ಡ್ ಕಾರ್ಡ್ ಹೊಂದಿದ ಭಕ್ತರಿಗೆ ಬೆಳಿಗ್ಗೆ 7ರಿಂದ 10 ಹಾಗೂ 10.30ರಿಂದ ಮಧ್ಯಾಹ್ನ 12.30ರವರೆಗೆ ದರ್ಶನ ಸಮಯ ನಿಗದಿ ಮಾಡಲಾಗಿದೆ ಎಂದರು. ಸಾಮಾನ್ಯ ಭಕ್ತರ ಅನುಕೂಲಕ್ಕಾಗಿ ಕ್ಯೂ ವ್ಯವಸ್ಥೆ ಸರಳೀಕರಣಗೊಂಡಿದ್ದು, ಸಾಮಾನ್ಯ ದರ್ಶನಕ್ಕೆ ಒಂದು ಕ್ಯೂ,ಟಿಕೆಟ್ಧಾರಕರಿಗೆ ಎರಡು ಕ್ಯೂ ಮತ್ತು ಶಿಷ್ಟಾಚಾರ ದರ್ಶನಕ್ಕೆ ಪ್ರತ್ಯೇಕ ಕ್ಯೂ ವ್ಯವಸ್ಥೆ ರೂಪಿಸಲಾಗಿದೆ.
ಗೋಲ್ಡ್ ಕಾರ್ಡ್ ಪಡೆದ ಭಕ್ತರಿಗೆ ಬೆಳಿಗ್ಗೆ 7.30ರಿಂದ 10ರವರೆಗೆ, ವಿಐಪಿಗಳಿಗೆ 10.30ರಿಂದ 12.30ರವರೆಗೆ ದರ್ಶನ ಅವಕಾಶ ಇರಲಿದೆ. “ಐದು ಅಥವಾ ಆರು ಗಣ್ಯರಿಗೆ ಮಾತ್ರ ಶಿಷ್ಟಾಚಾರ ಅನ್ವಯವಾಗಲಿದೆ,” ಎಂದ ಅವರು.
ಭಕ್ತರ ಸುಗಮ ದರ್ಶನಕ್ಕಾಗಿ ನೀರು, ಮಜ್ಜಿಗೆ, ಶೌಚಾಲಯ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಒಟ್ಟು 120 ಶೌಚಾಲಯಗಳನ್ನು ನಿರ್ಮಿಸಿ, ಪ್ರತಿಯೊಂದಕ್ಕೂ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ. ಆರೋಗ್ಯ, ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಗಳು ಸಹಕಾರ ನೀಡಲಿವೆ ಎಂದು ತಿಳಿಸಿದರು.
ಇದನ್ನು ಓದಿ: ಆಕಾಶದ ಯೋಧರ ಮರಳಿನ ಹಾರಾಟ — ರಾಮದೇವರ ಬೆಟ್ಟದಲ್ಲಿ ರಣಹದ್ದುಗಳ ಪುನರುತ್ಥಾನ
ದೇವಸ್ಥಾನದ ಸುತ್ತ ಪಾದರಕ್ಷೆ ಬಿಡಲು ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಸಾರಿಗೆ ಮತ್ತು ರೈಲು ನಿಲ್ದಾಣಗಳಲ್ಲಿ ಭಕ್ತರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಆನ್ಲೈನ್ ಬುಕ್ಕಿಂಗ್, ವಾಟ್ಸಪ್ ಚಾಟ್ಬಾಟ್ ಮತ್ತು ಎಐ ತಂತ್ರಜ್ಞಾನದ ಮೂಲಕ ದೇವಿ ದರ್ಶನದ ಮಾಹಿತಿಯನ್ನು ಪಡೆಯಬಹುದಾಗಿದೆ.
ಜಾತ್ರೆಯ ಆಕರ್ಷಣೆಯಾಗಿ ವಸ್ತು ಪ್ರದರ್ಶನ, ಡಾಗ್ ಶೋ, ಪಾಕ ಸ್ಪರ್ಧೆ, ಹೆಲಿ ಟೂರಿಸಂ ಮತ್ತು ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಒಟ್ಟು 12 ಪ್ರವಾಸಿ ಪ್ಯಾಕೇಜ್ಗಳನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.
ವಿವಿಐಪಿಗಳ ಜೊತೆ ಬರುವವರಿಗೆ ನಂಬರ್ ವ್ಯವಸ್ಥೆ ಜಾರಿಯಲ್ಲಿದ್ದು, ವಿವಿಐಪಿಗಳು ಗರಿಷ್ಠ ನಾಲ್ವರನ್ನು ಮಾತ್ರ ಕರೆದುಕೊಂಡು ಬರಬಹುದೆಂದು ಅವರು ಸ್ಪಷ್ಟಪಡಿಸಿದರು. ಸಚಿವರು ಹಾಗೂ ವಿಐಪಿಗಳು ತಮ್ಮ ವಾಹನಗಳನ್ನು ಐಬಿ ಆವರಣದಲ್ಲಿ ನಿಲ್ಲಿಸಿ, ಜಿಲ್ಲಾಡಳಿತ ಒದಗಿಸುವ ವಾಹನಗಳ ಮೂಲಕ ದೇವಾಲಯಕ್ಕೆ ತೆರಳಬೇಕೆಂದು ಸೂಚಿಸಿದರು.
ದೇವಾಲಯಕ್ಕೆ ಬರುವ ಎಲ್ಲ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿಯೇ ಆಗಮಿಸಬೇಕೆಂದು ಜಿಲ್ಲಾಧಿಕಾರಿ ಲತಾಕುಮಾರಿ ಕೋರಿದರು.
