ಹಾಸನ: ಶ್ರೀ ಹಾಸನಾಂಬ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರ ಸಂಚಾರವನ್ನು ನಿಯಂತ್ರಿಸಲು ಹಾಸನ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
ರಾಜ್ಯ ಮತ್ತು ಹೊರರಾಜ್ಯದ ವಿವಿಧ ಭಾಗಗಳಿಂದ ಭಕ್ತಾಧಿಗಳು ಹರಿದು ಬರುತ್ತಿದ್ದು, ದರ್ಶನಕ್ಕಾಗಿ ಕಲ್ಪಿಸಿರುವ ಸ್ಥಳಾವಕಾಶವನ್ನು ಮೀರಿ ಸುತ್ತಮುತ್ತಲಿನ ರಸ್ತೆಗಳಲ್ಲಿ 3-7 ಕಿ.ಮೀ ದೂರದವರೆಗೆ ಸರತಿ ಸಾಲುಗಳು ಉಂಟಾಗುತ್ತಿವೆ. ದೀಪಾವಳಿ ಹಬ್ಬದ ರಜೆಗಳ ಸಂದರ್ಭದಲ್ಲಿ ಭಕ್ತರ ಸಂಖ್ಯೆಯು ಹೆಚ್ಚುವ ನಿರೀಕ್ಷೆಯಿದೆ.
ಹಾಸನ ನಗರದ ಚಿಕ್ಕ ಸ್ಥಳ ಮತ್ತು ದೇವಸ್ಥಾನದ ಸುತ್ತಮುತ್ತಲಿನ ಕಡಿಮೆ ಸ್ಥಳಾವಕಾಶದಿಂದಾಗಿ, ಸರತಿ ಸಾಲುಗಳಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ನೂಕುನುಗ್ಗಲು ಮತ್ತು ಅಹಿತಕರ ಘಟನೆಗಳ ಸಂಭವದ ಭೀತಿ ಉಂಟಾಗಿದೆ.
ಜಿಲ್ಲಾಧಿಕಾರಿಗಳ ಸೂಚನೆಯಂತೆ, ಹೊರ ಜಿಲ್ಲೆಗಳಿಂದ ಆಗಮಿಸುವ ಕೆಎಸ್ಆರ್ಟಿಸಿ ಬಸ್ಗಳು ಮತ್ತು ಇತರೆ ವಾಹನಗಳಲ್ಲಿ ಭಕ್ತರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಭಕ್ತರ ಸಂಖ್ಯೆಯನ್ನು ನಿಯಂತ್ರಿಸದಿದ್ದಲ್ಲಿ ಸರತಿ ಸಾಲಿನಲ್ಲಿ ಉಂಟಾಗುವ ನೂಕುನುಗ್ಗಲು ಅಥವಾ ಅಹಿತಕರ ಘಟನೆಗಳಿಗೆ ಪೊಲೀಸ್ ಇಲಾಖೆ ಜವಾಬ್ದಾರಿಯಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಭಕ್ತರಿಗೆ ಶಾಂತವಾಗಿ ಸರತಿ ಸಾಲಿನಲ್ಲಿ ದರ್ಶನ ಪಡೆಯಲು ಸಹಕರಿಸುವಂತೆ ಮನವಿ ಮಾಡಲಾಗಿದೆ.
