ಪ್ರತಿ ದಿನ ಬೆಳಿಗ್ಗೆ ಎದ್ದ ಕ್ಷಣದಿಂದಲೇ, ನಮ್ಮ ಬದುಕು ಒಂದೇ ಚಕ್ರದಲ್ಲಿ ಸಿಲುಕುತ್ತದೆ. ಕುಟುಂಬದ ಜಂಜಾಟ… ಸಣ್ಣಸಣ್ಣ ಕಲಹಗಳು… ಆಫೀಸ್ ˌ ಮನೆ ಕೆಲಸಗಳುˌ ಅನೇಕ ಬಿಲ್ ಗಳುˌ ಹಲವು ಕಮಿಂಟ್ ಮೆಂಟ್ ಗಳು ˌ ಬ್ಯಾಂಕ್ ಲೋನಗಳುˌ ಅವುಗಳ EMI ಕಟ್ಟುವ ಸಮಸ್ಯೆಗಳುˌ ಮನೆ ಕಟ್ಟುವ ಆಸೆಗಳುˌ ಗ್ಯಾಸˌ ಪೆಟ್ರೋಲ್ ಸಮಸ್ಯೆˌ ಹೆಚ್ಚುತ್ತಿರುವ ಬೆಲೆಗಳುˌ ಮಕ್ಕಳ ಶಿಕ್ಷಣˌ ಮದುವೆˌ ಸಂಬಂಧಗಳುˌ ಚೂರುಪಾರು ಆಸ್ತಿ ಹೊಡೆದಾಟಗಳುˌ ದಾಯಾದಿ ಕಲಹಗಳುˌ ಕೊರ್ಟ ಕಛೇರಿ ಅಲೆದಾಟಗಳುˌ ಗಂಡ ಹೆಂಡತಿ ಜಗಳಗಳುˌ ಮಕ್ಕಳ ದುರ್ವತನೆˌ ತಿಂಗಳ ಬಜೆಟ್ ಹೊಂದಾಣಿಕೆ, ರಿಟೈರಮೆಂಟ್ ˌ ಪೆನಶ್ಯನ್ ˌ ಮೊಮ್ಮಕ್ಕಳು…
ಅದರಲ್ಲಿಯು ನಮ್ಮದೇ ಸಿದ್ಧಾಂತಗಳು, ತತ್ವಗಳು… ಜಾತಿˌ ಧರ್ಮˌ ಕರ್ಮˌ ರಾಷ್ಟ್ರ ˌ ಪಕ್ಷಗಳುˌ ಮೋದಿಯೋ ˌ ಗಾಂಧಿಯೋ? ಅಮೇರಿಕ ಇರಾಣ ಮುಂದೇನೋ?
ರಾಜಕೀಯ, ಚುನಾವಣೆ, ಯುದ್ಧ, ಸಂಘರ್ಷ… ಸೋಶಿಯಲ್ ಮಿಡಿಯಾ…24 ಗಂಟೆ ಒದರುವ ಸುದ್ದಿ ಮಾಧ್ಯಮಗಳು… ಭಾರತದ ಬಹುತೇಕ ಬಡ ಮತ್ತು ಮಧ್ಯಮ ವರ್ಗ ಇದೇ ಚಕ್ರದಲ್ಲಿ ಸಿಲುಕಿದೆˌ ಬದುಕಿದೆ ಎನ್ನಿಸುತ್ತದೆ…ಆದರೆ ಬದುಕಿಲ್ಲಾ… ಸುಮ್ನೆ ಯಾಂತ್ರಿಕವಾಗಿ ಚಲಿಸುತ್ತೀದೆ. ಬಹಳಷ್ಟು ಮಂದಿಗೆ ಕೇಳಿದಾಗˌ ಅವರು ಹೇಳುತ್ತಾರೆ ಹುಟ್ಟಿದ್ದೇವೆ ಅದಕ್ಕೆ ಬದುಕಬೇಕಷ್ಟೆ… ಜೀವನ ತುಂಬಾ ಯಾಂತ್ರಿಕವಾಗಿ ಒಂದೇ ವರ್ತುಲದಲ್ಲಿ ಸುತ್ತುತ್ತಲೆ ಇರುತ್ತದೆ.
ಹೊಸದನ್ನು ನೋಡಲಿಲ್ಲ ˌ ಹೊಸದನ್ನು ಕಲಿಯಲಿಲ್ಲ ˌ ಎಲ್ಲಿಯೂ ತಿರಗಲಿಲ್ಲ…ಜೀವನ ಗಾಣದೆತ್ತಿನಂತೆ ಅಲ್ಲಿಯೆ ತಿರುಗುತ್ತಲೆ ಇರುತ್ತದೆ.
ಯಾರನ್ನಾದರೂ ಭೇಟಿಯಾದರೆ —
ಅದೇ ಚರ್ಚೆ, ಅದೇ ಪ್ರತಿಕ್ರಿಯೆ, ಅದೇ ವಾದ-ಪ್ರತಿವಾದ. ಗೆಳೆಯರ “ಗುಂಡು ಮೇಜಿನ” ಪಾರ್ಟಿಗಳಲ್ಲಿಯು ಇದೇ ಜಗಳ… ವಿರಸ …
ಇದೇ ಚಕ್ಕರದಲ್ಲಿ ಒಂದು ದಿನ ಮುಗಿಯುತ್ತದೆ. ಆದರೆ ಪ್ರಶ್ನೆ ಉಳಿಯುತ್ತದೆ: ಈ ದಿನದಲ್ಲಿ ನೀನು ಏನು ಕಲಿತ್ತೀಯ?
ನಾವು ಜಗತ್ತಿನ ಬಗ್ಗೆ ತುಂಬಾ ಚಿಂತಿಸುತ್ತೇವೆ.
ಆದರೆ ನಮ್ಮ ಜೀವನದ ಬಗ್ಗೆ ಎಷ್ಟು ಗಮನಿಸುತ್ತೇವೆ?
ಇಂದು ನೀನು ಮನೆಯಲ್ಲಿ ಹೊಸದಾಗಿ ಏನಾದರೂ ಅಡುಗೆ ಮಾಡಿದ್ದೀಯಾ? ಆ ರುಚಿಯಲ್ಲಿ ಹೊಸ ಅನುಭವ ಕಂಡೆಯಾ? ನೀನು ಮನೆ ಮುಂದಿನ ಗಿಡಗಳಲ್ಲಿ ನೀರು ಹಾಕುವಾಗ ಏನೂ ಮಾಡುತ್ತೀದ್ದಿ? ಮುಂಜಾನೆ ಚಹಾ ಕುಡಿಯುವಾಗ? ಚಹಾ ಕುಡಿಯುತ್ತಿದ್ದಿಯಾ ಅಥವಾ ಪೇಪರ ಚಹಾ ಎರಡು ಕುಡಿಯುತ್ತಿದ್ದೀಯಾ?? ಇಂದು ಯಾರಾದರೂ ಹೊಸ ಅತಿಥಿಯೊಂದಿಗೆ ಕುಳಿತು ಮಾತನಾಡಿದ್ದೀಯಾ?
ಅವರಲ್ಲಿ ಏನಾದರೂ ಕಲಿತ್ತೀಯಾ? ನಿನ್ನ ಮನೆಯ ನಾಯಿ ಮರಿಯೊಂದಿಗೆ ಏನಾದರೂ ಹೊಸದಾಗಿ ಆಟ ಆಡಿದೆಯಾ? ಮುಂಜಾನೆ ಸಂಜೆ ವಾಕಿಂಗ್ದಲ್ಲಿ ತಣ್ಣನೆ ಗಾಳಿ ಬೀಸುವ ಸುಖ ಅನುಭವಿಸಿದ್ದಿಯಾ?
ಅದರಲ್ಲೊಂದು ಜೀವನದ ನಿರಪರಾಧ ಸಂತೋಷವನ್ನು ಕಂಡೆಯಾ? ಜೀವನವು ದೊಡ್ಡ ಘಟನೆಗಳಲ್ಲಿ ಮಾತ್ರ ಇಲ್ಲ. ಅದು ಸಣ್ಣ ಕ್ಷಣಗಳಲ್ಲಿ ಅಡಗಿದೆ. ಆದರೆ ನಾವು ಅವನ್ನು ತಪ್ಪಿಸುತ್ತೇವೆ.
ಏಕೆಂದರೆ ನಮ್ಮ ಮನಸ್ಸು ಯಾವಾಗಲೂ “ಹೊರಗೆ” ಓಡುತ್ತಿದೆ. ಸಂತೋಷ “ದೊಡ್ಡದು” ಆಗಿ ಬರುತ್ತದೆ ಅಂದುಕೊಳ್ಳುತ್ತವೆ. ಅಂಥ ದೊಡ್ಡ ಸಂತೋಷವೆಂಬುವುದಿಲ್ಲ. ನಿನ್ನ ದಿನನಿತ್ಯ ಜೀವನದಲ್ಲಿ ಸಣ್ಣ ಖುಷಿಗಳನ್ನೆ ಅನುಭವಿಸುವುದನ್ನು ಕಲಿಯಬೇಕು.
ಜಗತ್ತಿನ ಸುದ್ದಿಗಳಲ್ಲಿ… ಇತರರ ಬದುಕಿನಲ್ಲಿ… ಅವರ ಇವರ ಮಾತುಗಳಲ್ಲಿ… ಇಂದು ಇಲ್ಲಿ ಸುದ್ದಿ…
ನಾಳೆ ಅಲ್ಲಿ ಸುದ್ದಿ…ಮತ್ತೊಂದು ದಿನ — ಅದು ರದ್ದಿ.
ಆದರೆ ನೀನು?
ನಿನ್ನೊಳಗೆ ಏನು ಉಳಿದಿದೆ?
“ನೀನು ನಿನ್ನನ್ನು ತಿಳಿಯದೇ, ಜಗತ್ತನ್ನು ತಿಳಿಯಲು ಸಾಧ್ಯವಿಲ್ಲ.” ಆದರೆ ನಾವು ಅದರ ವಿರುದ್ಧವಾಗಿ ಬದುಕುತ್ತೇವೆ. ಜಗತ್ತಿನ ಎಲ್ಲವನ್ನೂ ತಿಳಿಯಲು ಯತ್ನಿಸುತ್ತೇವೆˌ ಆದರೆ ನಮ್ಮನ್ನು ನಾವು ಮರೆತುಬಿಡುತ್ತೇವೆ.ಯಾರಾದರೂ ಏನಾದರೂ ಹೇಳಿದರುˌ ನಾವು ತಕ್ಷಣ ಪ್ರತಿಕ್ರಿಯಿಸುತ್ತೇವೆ.
“ಅವನು ಹೀಗೆ ಹೇಳಿದ… ನಾನು ಹೀಗೆ ಉತ್ತರ ಕೊಟ್ಟೆ…” ಇದರಿಂದ ಏನು ಲಾಭ?
ಇದು ನಿನ್ನ ಜೀವನವನ್ನು ಬದಲಾಯಿಸುತ್ತದೆಯಾ?
ಇದು ನಿನ್ನೊಳಗೆ ಹೊಸ ಅರಿವು ತರ್ತದೆಯಾ?
ಪ್ರತಿ ದಿನವನ್ನು ಒಂದು ಪ್ರಶ್ನೆಯಿಂದ ಮುಗಿಸು:
“ಇಂದು ನಾನು ಏನು ಕಲಿತೆ?” ಸಣ್ಣದಾದರೂ ಸಾಕು.
ಒಂದು ಹೊಸ ಆಲೋಚನೆ… ಒಂದು ಹೊಸ ಅನುಭವ… ಒಂದು ಹೊಸ ಅಭ್ಯಾಸ…
ಅದನ್ನು ಬರೆಯಿರಿ ˌ ಇತತರಿಗೆ ಬಿಡು ˌ ಅದು ನಿನಗೆ ಸ್ಪೂರ್ತಿಯಾಗುವುದು.
ಹೊರಗಡೆ ಬರೆಯಲು ಸಂಕೋಚವೇ ˌ ನಿನ್ನದೆ ಪರ್ಸನಲ್ ಡೈರಿಯಲ್ಲಿ ನಮೂದಿಸುˌ ಯಾಕೆಂದರೆ ಆ ಬರಹˌ ನಿನ್ನ ಬೆಳವಣಿಗೆಯ ಪ್ರತಿಬಿಂಬ.
ಜೀವನವು ಪ್ರತಿಕ್ಷಣವೂ ಹೊಸದು.
ನೀನು ಹಳೆಯ ಮನಸ್ಸಿನಿಂದ ಬದುಕಿದರೆ, ಹೊಸದನ್ನು ಕಳೆದುಕೊಳ್ಳುತ್ತೀಯ.
ನಿಸರ್ಗ ಪ್ರತಿ ಕ್ಷಣ ಪಾಠ ಮಾಡುತ್ತಿದೆ. ಮರದ ಎಲೆ ಬೀಳುವಾಗ… ಗಾಳಿ ಹಾದು ಹೋಗುವಾಗ… ಹಕ್ಕಿ ಹಾಡು ಕೇಳುವಾಗˌ ಮೋಡಗಳನ್ನು ˌ ನಕ್ಷತ್ರಗಳನ್ನು ನೋಡುವಾಗ…
ಮಳೆಯ ಹನಿ ಬಿದ್ದಾಗ… ಅವು ಹೇಳುತ್ತಿವೆ —
“ನೋಡು… ಕಲಿಯು…”
ಆದರೆ ನಾವು ಕೇಳುವುದಿಲ್ಲ.
ನೀನು ಜಗತ್ತನ್ನು ಬದಲಾಯಿಸಲು ಹೋಗಬೇಕಾಗಿಲ್ಲ.
ನೀನು ನಿನ್ನ ದಿನವನ್ನು ನೋಡಬೇಕು.
ನಿನ್ನ ಉಸಿರು…ನಿನ್ನ ನಡೆ… ನಿನ್ನ ಮಾತು… ನಿನ್ನ ಅನುಭವ… ಅಲ್ಲಿ ಜೀವನ ಅಡಗಿದೆ.
ಕೊನೆಗೆ… ಜೀವನ ದೊಡ್ಡ ಸಾಧನೆಗಳ ವಿಷಯವಲ್ಲ.
ಅದು ಸಣ್ಣ ಅರಿವಿನ ಪಥ.
ಪ್ರತಿ ದಿನ ಸ್ವಲ್ಪ ಕಲಿಯುವವನುˌ
ಒಂದು ದಿನ ಸಂಪೂರ್ಣವಾಗಿ ಬದಲಾಗುತ್ತಾನೆ.
ಹೀಗಾಗಿ… ಇವತ್ತು ನೀನು ಏನು ಕಲಿತ್ತೀಯ?
ಜಗತ್ತಿನ ಬಗ್ಗೆ ಅಲ್ಲ — ನಿನ್ನ ಬದುಕಿನ ಬಗ್ಗೆ.
ಇದಕ್ಕೆ ದೊಡ್ಡ ದೊಡ್ಡ ಗುರುಗಳ ಪ್ರವಚನˌ ಪಾಠˌ ಸಂದೇಶ ಯಾವುದು ಉಪಯೋಗವಿಲ್ಲ… ನೀನು ದಿನನಿತ್ಯದ ಬದುಕಲ್ಲಿ ಇವತ್ತು ಏನೂ ಹೊಸದನ್ನು ಕಲಿತ್ತೇ? ನಿನ್ನ ದಿನನಿತ್ಯದ ಜಂಜಾಟದ ಮಧ್ಯೆ ಇವತ್ತು ಹೇಗೆ ಬದುಕಿದೆ??? ಇದೇ ನಿಜವಾದ ಆಧ್ಯಾತ್ಮಿಕ ಮಾರ್ಗ…. ಇದನ್ನು ಕಲಿಸಲು ಯಾರು ಬೇಕಾಗಿಲ್ಲ. ನೀನು ಅರಿವಿನಿಂದ ಇದ್ರೆ ಸಾಕುˌ ನಿನ್ನ ಅರಿವೇ ಗುರುವಾಗುವುದು…
✍️*ಜಯದೇವ ಪೂಜಾರ*
7676870233
