ಚನ್ನರಾಯಪಟ್ಟಣ: ವಿಧಾನ ಪರಿಷತ್ನ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರ 55ನೇ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಭವ್ಯ ಆರೋಗ್ಯ ಶಿಬಿರ ಹಾಗೂ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಇಂದು ಆಯೋಜಿಸಲಾಗಿತ್ತು.
ಪಟ್ಟಣದ ಗಣಪತಿ ಪೆಂಡಾಲ್ನಲ್ಲಿ ನಡೆದ ಆರೋಗ್ಯ ಮೇಳಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಿದರು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಮಂದಿ ನಾಗರಿಕರು ಶಿಬಿರದಲ್ಲಿ ಭಾಗವಹಿಸಿ, ತಪಾಸಣೆ ಮಾಡಿಸಿಕೊಂಡು, ತಮಗಿದ್ದ ಆರೋಗ್ಯ ಸಮಸ್ಯೆಗಳ ಕುರಿತು ವೈದ್ಯರಿಂದ ಸಲಹೆ–ಸೂಚನೆಗಳನ್ನು ಪಡೆದುಕೊಂಡರು. ಶಿಬಿರಕ್ಕೆ ಆಗಮಿಸಿದವರಿಗೆ ಲಘು ಉಪಹಾರದ ವ್ಯವಸ್ಥೆಯೂ ಮಾಡಲಾಗಿತ್ತು.
ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಲಾದ ಕಬಡ್ಡಿ ಪಂದ್ಯಾವಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಚಾಲನೆ ನೀಡಿದರು. ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ 16 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಎರಡು ದಿನಗಳ ಕಾಲ ಪಟ್ಟಣದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಸ್ಪರ್ಧೆ ನಡೆಯಲಿದೆ. ಆಟಗಾರರು ಗೆಲುವಿಗಾಗಿ ಹೋರಾಡುತ್ತಾ ರೋಚಕ ಕ್ಷಣಗಳನ್ನು ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರು ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಶುಭಾಶೀರ್ವಾದ ನೀಡಿದರು.
ಕಾರ್ಯಕ್ರಮದಲ್ಲಿ ಹಾಸನ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್, ಮಾಜಿ ಎಂಎಲ್ಸಿ ಹಾಗೂ ಕೆಡಿಪಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ಕಾಂಗ್ರೆಸ್ ಮುಖಂಡರು ಹೆಚ್.ಕೆ. ಮಹೇಶ್, ಮುರಳಿ ಮೋಹನ್, ಅಣತಿ ಆನಂದ್, ಸಿ.ಎಸ್. ಯುವರಾಜ್, ಎಂ.ಕೆ. ಮಂಜೇಗೌಡ, ಗಣಪತಿ ಆಸ್ಥಾನ ಮಂಟಪದ ಅಧ್ಯಕ್ಷ ಸಿ.ಎನ್. ಅಶೋಕ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಬಿಗ್ ಬಾಸ್ ಖ್ಯಾತಿಯ ಐಶ್ವರ್ಯ ಸಿಂಧೋಗಿ, ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಮುಖಂಡೆ ಕುಸುಮ ಹಾಗೂ ಅನೇಕ ಗಣ್ಯರು ಹಾಜರಿದ್ದರು. ಪಂದ್ಯಾವಳಿಯ ರೋಚಕ ಕ್ಷಣಗಳನ್ನು ಸಾವಿರಾರು ಕ್ರೀಡಾಭಿಮಾನಿಗಳು ಕಣ್ತುಂಬಿಕೊಂಡು ಸಂಭ್ರಮಿಸಿದರು.
– ಮಂಜುನಾಥ್ ಐ.ಕೆ
