ಬೆಂಗಳೂರು, ಮೇ 16: ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಉತ್ತಮವಾಗಿ ಮಳೆ ಆರಂಭವಾಗಿದೆ. ನಿತ್ಯವು ಸಂಜೆ ಇಲ್ಲವೇ ರಾತ್ರಿ ವೇಳೆ ಧಾರಾಕಾರವಾಗಿ ಸುರಿಯುತ್ತಿದೆ. ತಮಿಳುನಾಡು ಕರಾವಳಿಯ ಬಂಗಾಳಕೊಲ್ಲಿ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದ ಪ್ರಸರಣದಿಂದಾಗಿ ಕರ್ನಾಟಕದ ವಿವಿಧೆಡೆ ಮಳೆ ಸಕ್ರಿಯವಾಗಿದೆ.
ಈ ಪೈಕಿ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಮಳೆ ದಾಖಲಾಗಿದ್ದು, ಈ ಮಳೆ ಮೇ 20 ರವರೆಗೆ ಸುರಿಯಲಿದೆ.
ಮುಂಗಾರು ಬರುವ ಮೊದಲೇ ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಮಳೆ ಸಕ್ರಿಯವಾಗಿದೆ. ಮೇ ತಿಂಗಳಾಂತ್ಯದವರೆಗೆ ಮಳೆ ಬರುವ ಮುನ್ಸೂಚನೆ ಇದೆ. ಗುರುವಾರ ಪುಲಕೇಶಿನಗರದಲ್ಲಿ ಅತ್ಯಧಿಕ 30 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಜಕ್ಕೂರು, ಚೌಡೇಶ್ವರಿ, ಬಾಣಸವಾಡಿ, ಹೊರಮಾವು, ಪೀಣ್ಯ ಕೈಗಾರಿಕೆ ಪ್ರದೇಶ, ಶೆಟ್ಟಿಹಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಜೋರು ಮಳೆ ದಾಖಲಾಗಿದೆ. ಉಳಿದ ಕೆಲವು ಕಡೆಗಳಲ್ಲಿ ಹಗುರ ಮಳೆ ಆಗಿದೆ.
ಚಂಡಮಾರುತ ಪ್ರಭಾವದಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಆಗಿದೆ. ಅದೇ ರೀತಿ ಪ್ರತಿ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಜೋರು ಮಳೆ ಆಗುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ಮೇ ತಿಂಗಳಲ್ಲಿ ನಗರದಲ್ಲಿ ಅಷ್ಟಾಗಿ ಮಳೆ ಆಗಿರಲಿಲ್ಲ. ಇದೀಗ ಮೊದಲಿನಂತೆ ನಗರದಲ್ಲಿ ಪೂರ್ವ ಮುಂಗಾರು ಮಳೆ ಮೊದಲೇ ವರುಣ ನಿತ್ಯವು ದರ್ಶನ ನೀಡುತ್ತಿದೆ.
ಬೆಂಗಳೂರಲ್ಲಿ ಮಳೆ ಬಂತೆಂದರೆ ಸಾಕು ವಾಟರ್ಲಾಗಿಂಗ್ ಸಮಸ್ಯೆ, ರಸ್ತೆ ಗುಂಡಿ, ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಸಮಸ್ಯೆ ಈಡಾಗುತ್ತದೆ. ಈ ಸಂಬಂಧ ಬಿಬಿಎಂಪಿ ಮೇಲಿಂದ ಮೇಲೆ ಸಭೆ ಮಾಡಿಕೊಂಡು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುತ್ತಿದೆ. ಮಳೆಗಾಲದಲ್ಲಿ ಮರದ ಕೊಂಬೆಗಳು ಮುರಿದು ಬಿದ್ದರೆ, ಮರಗಳ ಧರೆಗುರುಳಿದರೆ, ರಸ್ತೆ ಸಂಚಾರ, ಮಳೆ ಹಾನಿ ಇನ್ನಿತರ ಸಮಸ್ಯೆ ಕಂಡು ಬಂದಲ್ಲಿ ತ್ವರಿತವಾಗಿ ಸ್ಪಂದಿಸುವಂತೆ ತಿಳಿಸಲಾಗಿದೆ.
ಬೆಂಗಳೂರಿನಲ್ಲಿ ಇಂದು ತಾಪಮಾನ ಎಷ್ಟಿದೆ?
ಬೆಂಗಳೂರಿನಲ್ಲಿ ವಾತಾವರಣದಲ್ಲಿ ಯಾವ ಬದಲಾವಣೆ ಆಗುವುದಿಲ್ಲ. ಬೆಳಗ್ಗೆಯಿಂದ ಮಧ್ಯಾಹ್ನ ಜೋರು ಬಿಸಿಲು ಕಂಡು ಬಂದರೆ, ಸಂಜೆ ಹೊತ್ತಿಗೆ ಮಳೆ ಜಮಾಯಿಸುತ್ತದೆ. ಇಂದು ಶುಕ್ರವಾರ (ಮೇ 16) ರಂದು ಬೆಳಗ್ಗೆ 10 ಗಂಟೆಗೆ ಹೊತ್ತಿಗೆ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಗರಿಷ್ಠ 33 ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಗರಿಷ್ಠ 31 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಬೆಂಗಳೂರು ನಗರದಲ್ಲಿ ಗರಿಷ್ಠ 31 ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
