ಹೇಮಗಿರಿ: ತಾಲ್ಲೂಕಿನ ಪವಿತ್ರ ಹೇಮಾವತಿ ನದಿ ದಂಡೆಯಲ್ಲಿರುವ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ, ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ಸನ್ನಿಧಿಯಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಅಭಿಷೇಕ, ಪುಷ್ಪಭಿಷೇಕ ಹಾಗೂ ವಿಶೇಷ ಅಲಂಕಾರ ಮಾಡಿ ಪೂಜೆಯನ್ನು ಸಲ್ಲಿಸಿ ಲೋಕ ಕಲ್ಯಾಣಾರ್ಥವಾಗಿ ಪ್ರಾರ್ಥನೆ ನಡೆಸಲಾಯಿತು.

ಶಾಸಕ ಎಚ್.ಟಿ ಮಂಜು,ರಮಾ ದಂಪತಿಗಳು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮತ್ತಿತರ ಗಣ್ಯರು ಹೇಮಗಿರಿ ಬೆಟ್ಟಕ್ಕೆ ತೆರಳಿ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಇದೇ ರೀತಿ ತಾಲ್ಲೂಕಿನ ಹೊಸಹೊಳಲಿನ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ, ವರಹನಾಥಕಲ್ಲಹಳ್ಳಿಯ ಭೂವರಹನಾಥಸ್ವಾಮಿ ದೇವಾಲಯ, ಹರಿಹರಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯ, ಕಿಕ್ಕೇರಿಯ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ, ಪಟ್ಟಣದ 8ನೇ ವಾರ್ಡಿನ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ, 17ನೇ ವಾರ್ಡಿನ ಶ್ರೀ ಮುತ್ತುರಾಯಸ್ವಾಮಿ ದೇವಾಲಯ, ಅಕ್ಕಿಹೆಬ್ಬಾಳಿನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಸೇರಿದಂತೆ ನೂರಾರು ದೇವಾಲಯಗಳಲ್ಲಿ ಸಡಗರ ಸಂಭ್ರಮದಿಂದ ಗೋವಿಂದನಾಮ ಸ್ಮರಣೆಗಳು ಮುಂಜಾನೆಯಿಂದ ರಾತ್ರಿವರೆವಿಗೂ ನಡೆದವು. ಭಕ್ತಾಧಿಗಳು ಸರತಿಯ ಸಾಲಿನಲ್ಲಿ ನಿಂತು ಗೋವಿಂದನ ದರ್ಶನ ಪಡೆದು ಪುನೀತರಾದರು.
– ಶ್ರೀನಿವಾಸ್ ಆರ್.
