ಹಾಸನ : ಕಾವೇರಿ ನೀರಾವರಿ ನಿಗಮಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟುಮಾಡುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಸರ್ಕಾರಕ್ಕಾಗುವ ನಷ್ಟ ತಪ್ಪಿಸಬೇಕೆಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆಗ್ರಹಿಸಿದ್ದಾರೆ.
ಹೇಮಾವತಿ ಜಲಾಶಯ ಭೂ ಸಂತ್ರಸ್ತರ ಪರಿಹಾರ ಸಂಬಂಧ ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು – “1986ರಲ್ಲಿ ಎಕರೆಗೆ ಕೇವಲ ಐದುರಿಂದ ಆರು ಸಾವಿರ ರೂ. ಪರಿಹಾರ ನಿಗದಿಯಾಗಿತ್ತು. ನಂತರ 2005ರಲ್ಲಿ ಮೇಲ್ಮನವಿಯಿಂದ ಅದನ್ನು ಎಕರೆಗೆ 30 ಸಾವಿರ ರೂಪಾಯಿಗೆ ಏರಿಸಲಾಯಿತು. ಈಗ ಮತ್ತೆ 15–20 ವರ್ಷಗಳ ಬಳಿಕ ಜಿಲ್ಲಾ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿ ಎಕರೆಗೆ 80 ಲಕ್ಷ ರೂ.ವರೆಗೆ ಪರಿಹಾರದ ಆದೇಶ ಪಡೆಯಲಾಗುತ್ತಿದೆ,” ಎಂದು ಆರೋಪಿಸಿದರು.
ಸದ್ಯ ಈಗಾಗಲೇ 500 ಕ್ಕೂ ಹೆಚ್ಚು ಜನರು ಮೇಲ್ಮನವಿ ಸಲ್ಲಿಸಿರುವುದಾಗಿ ತಿಳಿಸಿದ ಅವರು – “ಈ ಪ್ರಕರಣಗಳು ಇತ್ಯರ್ಥವಾದರೆ ಸರ್ಕಾರಕ್ಕೆ ಸಾವಿರ ಕೋಟಿಗೂ ಹೆಚ್ಚು ನಷ್ಟ ಸಂಭವಿಸುವ ಸಾಧ್ಯತೆ ಇದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಭೂಸ್ವಾಧೀನ ಅಧಿಕಾರಿಗಳ ಕುಮ್ಮಕ್ಕಿನಿಂದ ಈ ರೀತಿಯ ಕ್ರಮಗಳು ನಡೆಯುತ್ತಿವೆ,” ಎಂದು ಟೀಕಿಸಿದರು.
ಹಾಸನದ ಹಿಂದಿನ ಜಿಲ್ಲಾಧಿಕಾರಿ ಈ ವಿಷಯದಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿದ ರೇವಣ್ಣ – “ಉನ್ನತ ಮಟ್ಟದ ತನಿಖೆ ನಡೆಸಬೇಕು. ಕೃಷ್ಣಭೈರೇಗೌಡರು ಪ್ರಾಮಾಣಿಕರು, ಅವರ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ಆದರೆ ಅವರು ತಕ್ಷಣ ಪರಿಶೀಲನೆ ನಡೆಸಿ ನಷ್ಟ ತಡೆಗಟ್ಟಬೇಕು. ಇಲ್ಲವಾದರೆ ಕಾವೇರಿ ನೀರಾವರಿ ನಿಗಮ ಬಾಗಿಲು ಹಾಕಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದರು.
