ನವದೆಹಲಿ, ಅ.17: 2025ನೇ ಸಾಲಿನ ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕದಲ್ಲಿ ಭಾರತ ತನ್ನ ಸ್ಥಾನವನ್ನು ಕಳೆದುಕೊಂಡಿದೆ. ಕಳೆದ ವರ್ಷ (2024) 80ನೇ ಸ್ಥಾನದಲ್ಲಿದ್ದ ಭಾರತ, ಈ ಬಾರಿ 85ನೇ ಸ್ಥಾನಕ್ಕೆ ಕುಸಿದಿದೆ.
ಈ ಸೂಚ್ಯಂಕವು ಪ್ರತಿ ದೇಶದ ಪಾಸ್ಪೋರ್ಟ್ಗಳು ಎಷ್ಟು ರಾಷ್ಟ್ರಗಳಿಗೆ ವೀಸಾ ರಹಿತವಾಗಿ ಪ್ರವೇಶ ನೀಡುತ್ತವೆ ಎಂಬುದರ ಆಧಾರದ ಮೇಲೆ ರೂಪಿಸಲ್ಪಡುತ್ತದೆ. 193 ದೇಶಗಳಿಗೆ ವೀಸಾ ರಹಿತ ಪ್ರಯಾಣವನ್ನು ಖಾತರಿಪಡಿಸುವ ಸಿಂಗಾಪುರ ಪಾಸ್ಪೋರ್ಟ್ 2025ರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅದನ್ನು ಅನುಸರಿಸಿ ದಕ್ಷಿಣ ಕೊರಿಯಾ ಮತ್ತು ಜಪಾನ್ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನಗಳನ್ನು ಪಡೆದಿವೆ.
‘ಹೆನ್ಲಿ ಮತ್ತು ಪಾರ್ಟ್ನರ್ಸ್ ವೀಸಾ ನಿರ್ಬಂಧ ಸೂಚ್ಯಂಕ’ ಎಂಬ ಹೆಸರಿನಲ್ಲಿ 2005ರಲ್ಲಿ ಈ ವರದಿ ಆರಂಭಗೊಂಡಿತು. ನಂತರ 2018ರ ಜನವರಿಯಲ್ಲಿ ಅದನ್ನು ‘ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ’ ಎಂದು ಮರುನಾಮಕರಣ ಮಾಡಲಾಯಿತು.
ಭಾರತದ ಸ್ಥಾನ ಕುಸಿತವು ವೀಸಾ ನೀತಿಗಳು ಮತ್ತು ಅಂತಾರಾಷ್ಟ್ರೀಯ ಪ್ರಯಾಣ ಸೌಲಭ್ಯಗಳ ಮೇಲಿನ ಪ್ರಭಾವವನ್ನು ತೋರಿಸುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
