ಬೆಂಗಳೂರು: ಆದಾಯ ತೆರಿಗೆ ಬಾಕಿ ಇದೆ ಎಂಬ ಕಾರಣಕ್ಕೆ ಆಸ್ತಿ ನೋಂದಣಿಯನ್ನು ನಿರಾಕರಿಸಲು ಸಬ್ ರಿಜಿಸ್ಟ್ರಾರ್ಗಳಿಗೆ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುದ್ರಾಂಕ ಮತ್ತು ನೋಂದಣಿ ಕಾಯ್ದೆ ಹಾಗೂ ರಾಜ್ಯ ಸರ್ಕಾರದ ನೋಂದಣಿ ನಿಯಮಗಳ ಅನ್ವಯ ಮಾತ್ರ ಉಪನೋಂದಣಾಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ನಿಯಮಬಾಹಿರವಾಗಿ ನೋಂದಣಿಗೆ ನಿರಾಕರಿಸುವ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿರುವುದಕ್ಕೆ ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ. “ಆದಾಯ ತೆರಿಗೆ ಪಾವತಿ ಬಾಕಿ ಇದೆ” ಎಂಬ ಕಾರಣವನ್ನೇ ಮುಂದಿಟ್ಟುಕೊಂಡು ಹರಾಜು ಮೂಲಕ ಖರೀದಿಸಿದ ಆಸ್ತಿಯ ನೋಂದಣಿಯನ್ನು ತಡೆಹಿಡಿಯುವಂತಿಲ್ಲ ಎಂದು ಸಬ್ ರಿಜಿಸ್ಟ್ರಾರ್ಗಳಿಗೆ ತಾಕೀತು ಮಾಡಿದೆ.
ಪ್ರಕರಣದ ಹಿನ್ನಲೆ
ಬೆಂಗಳೂರಿನ ವಿಲ್ಸನ್ ಗಾರ್ಡನ್ನ ಹೊಂಬೇಗೌಡನಗರದಲ್ಲಿರುವ 6,000 ಚದರ ಅಡಿಯ ಅಡಮಾನ ಆಸ್ತಿಯನ್ನು 2022ರ ಮಾರ್ಚ್ನಲ್ಲಿ ಕೆನರಾ ಬ್ಯಾಂಕ್ ಹರಾಜು ಮಾಡಿತ್ತು. ಈ ಹರಾಜಿನಲ್ಲಿ ಭರತ್ ಗೌಡ ಅವರು ಯಶಸ್ವಿ ಬಿಡ್ಡುದಾರರಾಗಿ ಆಸ್ತಿ ಖರೀದಿಸಿದ್ದರು. ಹರಾಜು ಪ್ರಕ್ರಿಯೆ ಪೂರ್ಣಗೊಂಡ ಬಳಿಕ 2022ರ ಸೆಪ್ಟೆಂಬರ್ನಲ್ಲಿ ಅವರಿಗೆ ಮಾರಾಟ ಪ್ರಮಾಣಪತ್ರ ನೀಡಲಾಗಿತ್ತು.
ಆಸ್ತಿ ನೋಂದಣಿಗೆ ಅಗತ್ಯವಿರುವ ಮುದ್ರಾಂಕ ಶುಲ್ಕವನ್ನು ಪಾವತಿಸಿದ್ದ ಭರತ್ ಗೌಡ, ತಮ್ಮ ಹೆಸರಿಗೆ ನೋಂದಣಿ ಮಾಡಿಕೊಡುವಂತೆ ಜೆ.ಪಿ. ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು.
ಆದರೆ, “ಜಮೀನಿನ ಮೂಲ ಮಾಲೀಕರು ಆದಾಯ ತೆರಿಗೆ ಪಾವತಿಸಿಲ್ಲ. ಆದ್ದರಿಂದ ಆಸ್ತಿಯನ್ನು ನೋಂದಣಿ ಮಾಡಲು ಸಾಧ್ಯವಿಲ್ಲ” ಎಂದು ಸಬ್ ರಿಜಿಸ್ಟ್ರಾರ್ ಮೌಖಿಕವಾಗಿ ತಿಳಿಸಿದ್ದರು ಎನ್ನಲಾಗಿದೆ. ಬಳಿಕ 2024ರ ಫೆಬ್ರವರಿ 18ರಂದು ಮತ್ತೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಭರತ್ ಗೌಡ ಹೈಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್ನ ಸ್ಪಷ್ಟ ಅಭಿಪ್ರಾಯ
ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್, ಮುದ್ರಾಂಕ ಮತ್ತು ನೋಂದಣಿ ಕಾಯ್ದೆ ಹಾಗೂ ರಾಜ್ಯ ಸರ್ಕಾರ ರೂಪಿಸಿರುವ ನೋಂದಣಿ ನಿಯಮಗಳ ವ್ಯಾಪ್ತಿಯೊಳಗೆ ಮಾತ್ರ ಉಪನೋಂದಣಾಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದೆ.
ಸಾಲಗಾರರ ಆದಾಯ ತೆರಿಗೆ ಬಾಕಿಯಿದೆ ಎಂಬ ಕಾರಣ ನೀಡಿ, ಹರಾಜು ಮೂಲಕ ಅವರ ಆಸ್ತಿಯನ್ನು ಖರೀದಿಸಿದವರಿಗೆ ನೋಂದಣಿ ನಿರಾಕರಿಸುವಂತಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ನೋಂದಣಿ ನಿಯಮಗಳ ಪ್ರಕಾರ ಯಾವುದೇ ಕಾನೂನುಬದ್ಧ ಅಡಚಣೆಗಳಿಲ್ಲದಿದ್ದರೆ, ನೋಂದಣಿ ನಿರಾಕರಿಸುವ ಅಧಿಕಾರ ಉಪನೋಂದಣಾಧಿಕಾರಿಗಳಿಗೆ ಇಲ್ಲ ಎಂದು ಹೈಕೋರ್ಟ್ ಪುನರುಚ್ಚರಿಸಿದೆ.
ರಾಜ್ಯ ಸರ್ಕಾರಕ್ಕೂ ಸೂಚನೆ
ಇಂತಹ ಗೊಂದಲಕಾರಿ ಮತ್ತು ನಿಯಮಬಾಹಿರ ನಿರಾಕರಣೆಗಳು ಮರುಕಳಿಸದಂತೆ, ನೋಂದಣಿ ನಿಯಮಗಳ ಕುರಿತು ರಾಜ್ಯ ಸರ್ಕಾರ ಸೂಕ್ತ ಸುತ್ತೋಲೆ ಹೊರಡಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ತೀರ್ಪು ಹರಾಜು ಮೂಲಕ ಆಸ್ತಿ ಖರೀದಿಸಿದವರ ಹಕ್ಕುಗಳ ರಕ್ಷಣೆಗೆ ಮಹತ್ವದ ದಿಕ್ಕು ತೋರಿಸುವಂತಾಗಿದೆ.
