ಬೆಂಗಳೂರು: ವಯಸ್ಸಾದ ತಂದೆ-ತಾಯಿಯನ್ನು ನಿರ್ಲಕ್ಷಿಸುವ ಮಕ್ಕಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಅವರಿಗೆ ನೀಡಬೇಕಾದ ಜೀವನಾಂಶದ ಮೊತ್ತವನ್ನು ಹೆಚ್ಚಿಸಲು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಇತ್ತೀಚಿನ ದಿನಗಳಲ್ಲಿ ಹಲವಾರು ಮಕ್ಕಳು ತಮ್ಮನ್ನು ಸಾಕಿ ಬೆಳೆಸಿದ ಪೋಷಕರನ್ನು ನೋಡಿಕೊಳ್ಳದೆ, ಮೂಲೆಗುಂಪು ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವರು ಪೋಷಕರನ್ನು ತಮ್ಮ ಮನೆಗಳಲ್ಲಿ ಇರಿಸಿಕೊಂಡು ಕೆಲಸ ಮಾಡಿಸಿಕೊಂಡು, ಅವರ ಹಕ್ಕುಗಳನ್ನು ನಿರ್ಲಕ್ಷಿಸುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿಲ್ಲವೆಂಬ ಅಸಮಾಧಾನ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ 2007ರ ಪೋಷಕರ ಕಲ್ಯಾಣ ಕಾಯ್ದೆಯ ಸೆಕ್ಷನ್ 9ರಲ್ಲಿ ತಿದ್ದುಪಡಿ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಸ್ತುತ ಮಕ್ಕಳು ಪೋಷಕರಿಗೆ ನೀಡಬೇಕಾದ ಗರಿಷ್ಠ ಜೀವನಾಂಶದ ಮಿತಿ ₹10,000 ಆಗಿದ್ದು, 2007ರ ಜೀವನಾವಶ್ಯಕ ವೆಚ್ಚ ಮತ್ತು 2025ರ ಹಣದುಬ್ಬರವನ್ನು ಪರಿಗಣಿಸಿದಾಗ ಈ ಮೊತ್ತ ಅಸಮರ್ಪಕವಾಗಿದೆ ಎಂದು ನ್ಯಾಯಾಲಯ ಸೂಚಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದಂತ ನ್ಯಾಯಪೀಠವು, ಜೀವನಾಂಶ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಪೋಷಕರ ಕಲ್ಯಾಣ ಕಾಯ್ದೆಯಡಿ, ತಂದೆ-ತಾಯಿ ಯೋಗಕ್ಷೇಮ ನಿರ್ಲಕ್ಷಿಸಿದರೆ ಮಕ್ಕಳು ಜೀವನಾಂಶ ನೀಡುವುದು ಕಡ್ಡಾಯ. ಹೊಸ ತಿದ್ದುಪಡಿ ಜಾರಿಯಾದರೆ, ಮಕ್ಕಳು ತಮ್ಮ ಪೋಷಕರನ್ನು ದೂರ ತಳ್ಳುವುದನ್ನು ತಪ್ಪಿಸಲು ಇದು ಪ್ರಮುಖ ಹೆಜ್ಜೆಯಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
