ಇತಿಹಾಸದಲ್ಲಿ ಸಾಮ್ರಾಜ್ಯಗಳ ವಿಸ್ತಾರ, ಯುದ್ಧಗಳ ಗರ್ಜನೆ ಮತ್ತು ಅಧಿಕಾರದ ರಾಜಕೀಯವೇ ಹೆಚ್ಚಾಗಿ ಕಾಣಿಸುತ್ತದೆ. ಆದರೆ ಕೆಲವೊಮ್ಮೆ, ಒಬ್ಬ ದೊರೆಯ ಜೀವನಶೈಲಿ ಮತ್ತು ಆತನ ಆಂತರಿಕ ಪರಿವರ್ತನೆ ಕೂಡ ಇತಿಹಾಸದ ದಿಕ್ಕನ್ನೇ ಬದಲಿಸಬಲ್ಲದು. ಧರ್ಮದ ಗಡಿಗಳನ್ನು ಮೀರಿ, ಅಹಿಂಸೆ, ದಯೆ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿದ ಒಬ್ಬ ಮಹಾನ್ ಚಕ್ರವರ್ತಿ ಇದ್ದನು.
ಮಾಂಸಾಹಾರ ಸಾಮಾನ್ಯವಾಗಿದ್ದ ಕಾಲಘಟ್ಟದಲ್ಲೇ ಸಸ್ಯಾಹಾರವನ್ನು ಆರಿಸಿಕೊಂಡ ಈ ಮುಸ್ಲಿಂ ದೊರೆಯ ಕಥೆ, ಇಂದಿಗೂ ಆಶ್ಚರ್ಯ ಮತ್ತು ಪ್ರೇರಣೆಯಾಗಿ ಉಳಿದಿದೆ. ಆ ಕುರಿತ ವರದಿ ಇಲ್ಲಿದೆ:
ಇತಿಹಾಸದ ಪುಟಗಳನ್ನು ತಿರುವಿದಾಗ ರಾಜರು ಎಂದರೆ ನಮಗೆ ಮೊದಲು ನೆನಪಾಗುವುದು ರಕ್ತಸಿಕ್ತ ಯುದ್ಧಗಳು, ಸಾಮ್ರಾಜ್ಯದ ವಿಸ್ತರಣೆ ಮತ್ತು ಅರಮನೆಯ ವೈಭವ. ಆದರೆ, ಅಧಿಕಾರದ ಉತ್ತುಂಗದಲ್ಲಿದ್ದೂ ತನ್ನ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು, ಹಿಂಸೆಯ ಹಾದಿ ತೊರೆದು ಅಹಿಂಸೆಯ ಮಾರ್ಗ ತುಳಿದ ಅರಸರು ಬಹಳ ಅಪರೂಪ. ಅಂತಹ ಅಪರೂಪದ ರಾಜರಲ್ಲಿ ಮೊಘಲ್ ಸಾಮ್ರಾಟ (Mughal Emperor) ಅಕ್ಬರ್ (Akbar) ಒಬ್ಬರು. ಮಾಂಸಾಹಾರವೇ (Non – Vegetarianism) ಬದುಕಿನ ಭಾಗವಾಗಿದ್ದ ಕಾಲಘಟ್ಟದಲ್ಲಿ, ಕೇವಲ ಜೈನ ಸನ್ಯಾಸಿಗಳ (Jain Monks) ತತ್ವಗಳಿಗೆ ಮಾರುಹೋಗಿ ಸಸ್ಯಾಹಾರವನ್ನು (Vegetarianism) ಅಪ್ಪಿಕೊಂಡ ಅಕ್ಬರನ ಕಥೆ ಇಂದಿಗೂ ನಮಗೆ ಮಾನವೀಯ ಮೌಲ್ಯಗಳ ಪಾಠ ಮಾಡುತ್ತದೆ. ರಾಜವೈಭೋಗದ ನಡುವೆಯೂ ಸಸ್ಯಾಹಾರದ ಸಾತ್ವಿಕತೆಯನ್ನು ಕಂಡುಕೊಂಡ ಅಕ್ಬರನ ಜೀವನದ ಆ ರೋಚಕ ಸಂಗತಿಗಳು ಇಲ್ಲಿದೆ:

ಸಾಮಾನ್ಯವಾಗಿ ಮುಘಲ್ ಅರಮನೆಯು ಮಾಂಸಾಹಾರಕ್ಕೆ ಪ್ರಸಿದ್ಧವಾಗಿದ್ದರೂ, ಅಕ್ಬರ್ ಅವರ ವೈಯಕ್ತಿಕ ಬದುಕಿನಲ್ಲಿ ಸಸ್ಯಾಹಾರದತ್ತ ನಡೆದ ತಿರುವು ಇತಿಹಾಸಕಾರರ ಗಮನ ಸೆಳೆದಿದೆ. ಈ ಬದಲಾವಣೆಯ ಹಿಂದೆ ಜೈನ ಧರ್ಮದ ಮಹಾನ್ ಸಾಧುಗಳ ಪ್ರಭಾವವಿತ್ತು ಎಂಬುದು ಹಲವು ಐತಿಹಾಸಿಕ ಮೂಲಗಳಿಂದ ತಿಳಿಸುತ್ತದೆ.
ಅಕ್ಬರ್ ಮತ್ತು ಜೈನ ಸಾಧುಗಳ ಭೇಟಿ…
ಮುಘಲ್ ಇತಿಹಾಸಕಾರ ಹಾಗೂ ಅಕ್ಬರ್ ಅವರ ಆಪ್ತ ಸಲಹೆಗಾರರಾದ ಅಬುಲ್ ಫಜಲ್ ತಮ್ಮ ಪ್ರಸಿದ್ಧ ಕೃತಿಯಾದ ‘ಐನ್ ಎ ಅಕ್ಬರಿ’ಯಲ್ಲಿ, ಚಕ್ರವರ್ತಿಯ ಜೀವನದಲ್ಲಿ ಜೈನ ಸಾಧುಗಳ ಪ್ರಭಾವವನ್ನು ವಿವರಿಸಿದ್ದು, ಅದರ ಪ್ರಕಾರ, ಅಕ್ಬರ್ ಅವರ ಜೀವನದಲ್ಲಿ ಇಬ್ಬರು ಪ್ರಮುಖ ಜೈನ ಸಾಧುಗಳು ಪ್ರವೇಶಿಸಿ, ಮಾಂಸಾಹಾರದ ಬಗ್ಗೆ ಅಸಹ್ಯ ಭಾವನೆ ಮೂಡಿಸಿದರು. ಇದರ ಪರಿಣಾಮವಾಗಿ ಅಕ್ಬರ್ ನಿಧಾನವಾಗಿ ಸಸ್ಯಾಹಾರದತ್ತ ಮುಖ ಮಾಡಿದರು. ಜೊತೆಗೆ ಜೀವನದ ಕೊನೆಯ ವರ್ಷಗಳಲ್ಲಿ ಬಹುತೇಕವಾಗಿ ಸಂಪೂರ್ಣ ಸಸ್ಯಾಹಾರಿಯಾಗಿದ್ದರು ಎನ್ನಲಾಗಿದೆ.
ಅಕ್ಬರ್ನನ್ನು ಪ್ರಭಾವಿಸಿದ ಜೈನ ಸಾಧುಗಳು ಯಾರು?
ಅಕ್ಬರ್ ಅವರ ಹೊಸ ಚಿಂತನೆಗೆ ದಿಕ್ಕು ನೀಡಿದ ಪ್ರಮುಖ ಜೈನ ಸಾಧುಗಳು ಆಚಾರ್ಯ ಹರಿವಿಜಯ ಸೂರಿ ಮತ್ತು ಅವರ ಶಿಷ್ಯರಾದ ಆಚಾರ್ಯ ಜಿನಚಂದ್ರ ಸೂರಿ. ಜೈನ ಗ್ರಂಥಗಳಾದ ವಿಜಯಪ್ರಬಂಧ ಮತ್ತು ಹರಿವಿಜಯ ಸೂರಿಯ ಪ್ರಶಸ್ತಿಯಲ್ಲಿ ಈ ಘಟನೆಗಳ ವಿವರದಂತೆ, ಈ ಸಾಧುಗಳ ಪ್ರವಚನಗಳನ್ನು ಕೇಳಿದ ಬಳಿಕ ಅಕ್ಬರ್ ಮನೋಭಾವದಲ್ಲಿ ಮಹತ್ವದ ಬದಲಾವಣೆ ಉಂಟಾಗಿ, ಮುಂದೆ ಮಾಂಸಾಹಾರವನ್ನೇ ತ್ಯಜಿಸಿದರು ಎಂದು ತಿಳಿಸಲಾಗಿದೆ. ಜೊತೆಗೆ ಆಚಾರ್ಯ ಹರಿವಿಜಯ ಸೂರಿ ಅವರಿಗೆ ಅಕ್ಬರ್ ಜಗತ್ತ್ ಗುರು ಎಂಬ ಬಿರುದನ್ನು ಸಹ ನೀಡಿದ್ದ ಎನ್ನಲಾಗಿದೆ.

ನ್ಯೂಸ್ 18 ಹಿಂದಿ ವರದಿ ಮಾಡಿರುವಂತೆ, ಆಚಾರ್ಯ ಹರಿವಿಜಯ ಸೂರಿಯ ಕಾಲಾವಧಿ 1527ರಿಂದ 1595ರವರೆಗೆ ಎಂದು ಇತಿಹಾಸಕಾರರು ಗುರುತಿಸಿದ್ದಾರೆ. ಅವರು ಶ್ವೇತಾಂಬರ ಜೈನ ಧರ್ಮದ ತಪಾಗಚ್ಛ ಪರಂಪರೆಯ ಪ್ರಮುಖ ಆಚಾರ್ಯರಾಗಿದ್ದು, ಆ ಪರಂಪರೆಯ 30ನೇ ಆಚಾರ್ಯ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಜನಿಸಿದ ಅವರು ಪಾಂಡಿತ್ಯ, ವಾಗ್ಮಿತೆ ಮತ್ತು ಸಂಘಟನಾ ಸಾಮರ್ಥ್ಯಕ್ಕಾಗಿ ಪ್ರಸಿದ್ಧರಾಗಿದ್ದರು. ಅಕ್ಬರ್ ಅವರಿಂದ ಅವರಿಗೆ ಜಗದ್ಗುರು ಎಂಬ ಬಿರುದು ಕೂಡ ದೊರಕಿತ್ತು.
ಇದರೊಂದಿಗೆ, ಜೈನ ಸಾಧುಗಳ ಪ್ರಭಾವದಿಂದ ಅಕ್ಬರ್ ಹಲವು ಮಹತ್ವದ ಆದೇಶಗಳನ್ನು ಹೊರಡಿಸಿದರು. ಈದ್ ದಿನದಂದು ಗೋ ಹತ್ಯೆ ನಿಷೇಧ, ನಿರ್ದಿಷ್ಟ ತಿಂಗಳುಗಳಲ್ಲಿ ಮತ್ತು ವಾರದ ಕೆಲವು ದಿನ ಅಂದರೆ ಅಕ್ಬರ್ನ ಜನ್ಮದಿನವಾದ ಬುಧವಾರ ಮತ್ತು ಭಾನುವಾರದಂದು ಪ್ರಾಣಿ ಹತ್ಯೆಗೆ ತಡೆ, ಕಾಡು ಪ್ರಾಣಿಗಳ ಬೇಟೆಗೆ ನಿಷೇಧ ಹಾಗೂ ಜೀವಂತ ಪ್ರಾಣಿಗಳ ಮಾರಾಟಕ್ಕೆ ನಿರ್ಬಂಧ ಇವುಗಳಲ್ಲಿ ಪ್ರಮುಖವಾಗಿವೆ.

ಮುಂದುವರೆದು, ಈ ಜೈನ ಸಾಧುಗಳ ಪ್ರೇರಣೆಯಿಂದ ಮುಘಲ್ ಶಾಹಿ ಅಡುಗೆಮನೆಯಲ್ಲಿ ಮೊದಲ ಬಾರಿಗೆ ಜೈನ ಪಾಕಶಾಲೆ ಸ್ಥಾಪಿಸಲಾಯಿತು. ಇಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ರಹಿತ ಶುದ್ಧ ಸಸ್ಯಾಹಾರಿ ಆಹಾರವನ್ನು ತಯಾರಿಸಲಾಗುತ್ತಿತ್ತು. ಈ ವ್ಯವಸ್ಥೆ ಅಕ್ಬರ್ ನಂತರವೂ ಜಹಾಂಗೀರ್, ಶಾಹಜಹಾನ್ ಮತ್ತು ಔರಂಗಜೇಬ್ ಕಾಲದಲ್ಲಿಯೂ ಮುಂದುವರಿದಿತು. ಜೊತೆಗೆ ಶಾಹಿ ಅಡುಗೆಮನೆಯಲ್ಲಿ ಬ್ರಾಹ್ಮಣ ಮತ್ತು ಜೈನ ಅಡುಗೆಗಾರರಿಗೆ ವಿಶೇಷ ಸ್ಥಾನವೂ ದೊರೆಯಿತು.
ಒಟ್ಟಾರೆಯಾಗಿ ಹೇಳುವುದಾದರೆ… ಅಕ್ಬರ್ ಜೀವನಪೂರ್ತಿ ಕಠಿಣ ಸಸ್ಯಾಹಾರ ವ್ರತವನ್ನು ಸಾರ್ವಜನಿಕವಾಗಿ ಘೋಷಿಸದಿದ್ದರೂ, ಜೈನ ಸಾಧುಗಳ ಉಪದೇಶಗಳು ಅಕ್ಬರ್ ವೈಯಕ್ತಿಕ ಜೀವನ ಮತ್ತು ಕೆಲವು ಆಡಳಿತಾತ್ಮಕ ನೀತಿಗಳ ಮೇಲೆ ಗಾಢ ಪ್ರಭಾವ ಬೀರಿದವು. ಈ ಘಟನೆಯು ಅಕ್ಬರ್ ಅವರನ್ನು ಕೇವಲ ರಾಜನಾಗಿ ಮಾತ್ರವಲ್ಲ, ವಿಚಾರಶೀಲ ಮತ್ತು ಮಾನವೀಯ ಚಕ್ರವರ್ತಿಯಾಗಿ ಇತಿಹಾಸದಲ್ಲಿ ಗುರುತಿಸುವಂತೆ ಮಾಡಿತು.
