ಬೆಂಗಳೂರು: ಜಮ್ಮು-ಕಾಶ್ಮೀರದ ಪೆಹಲ್ಗಾಮ್ ದಾಳಿ ಬಳಿಕ ಪಾಕ್ ವಿರುದ್ಧ ಭಾರತದ ಸರ್ಕಾರ ಕೆಲ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಪಾಕಿಸ್ತಾನಗಳನ್ನು ದೇಶ ಬಿಟ್ಟು ಹೋಗುವಂತೆ ಸೂಚನೆ ನೀಡಿದೆ. ಅಷ್ಟೇ ಅಲ್ಲದೇ ತಮ್ಮ ತಮ್ಮ ರಾಜ್ಯದಲ್ಲಿರುವ ಪಾಕಿಸ್ತಾನಿಗಳನ್ನು ಹುಡುಕಿ ಹೊರ ಹಾಕುವಂತೆ ಮುಖ್ಯಮಂತ್ರಿಗಳಿಗೂ ಸೂಚಿಸಿದೆ. ಹಾಗಾದ್ರೆ ಕರ್ನಾಟಕದಲ್ಲಿ ಎಷ್ಟು ಮಂದಿ ಪಾಕಿಸ್ತಾನಿಗಳು ಇದ್ದಾರೆ.
ನಾಲ್ವರು ಪಾಕಿಸ್ತಾನಿ ಪ್ರಜೆಗಳು ಗಡಿಪಾರು!
ಪೆಹಲ್ಗಾಮ್ ದಾಳಿ ಬಳಿಕ ಕರ್ನಾಟಕದಲ್ಲಿದ್ದ ನಾಲ್ವರು ಪಾಕಿಸ್ತಾನದ ಪ್ರಜೆಗಳನ್ನು ರಾಜ್ಯದಿಂದ ಗಡಿಪಾರು ಮಾಡಲಾಗಿದೆ. ಈ ನಾಲ್ವರು ಪಾಕಿಸ್ತಾನ ಪ್ರಜೆಗಳು ಅಲ್ಪಾವಧಿ ವೀಸಾ ಹೊಂದಿದ್ದರು, ಇವರನ್ನು ರಾಜ್ಯ ಸರ್ಕಾರ ಗಡಿಪಾರು ಮಾಡಿದೆ. ದೀರ್ಘಾವಧಿ ವೀಸಾ ಹೊಂದಿರುವ 91 ಮಂದಿ ಪಾಕಿಸ್ತಾನ ಪ್ರಜೆಗಳು ಕರ್ನಾಟಕದಲ್ಲೇ ಇದ್ದು, ಇವರನ್ನು ಯಾಕೆ ಗಡಿಪಾರು ಮಾಡಿಲ್ಲ.
ಕರ್ನಾಟಕದಲ್ಲಿದ್ದಾರೆ 91 ಮಂದಿ!
4 ಜನರನ್ನು ಹೊರ ಕಳಿಸಿರುವ ಸರ್ಕಾರ 91 ಮಂದಿಯನ್ನು ಯಾಕೆ ಗಡಿಪಾರು ಮಾಡಿಲ್ಲ ಎಂಬ ಪ್ರಶ್ನೆ ಮೂಡಿದೆ. ಕೇಂದ್ರ ಸರ್ಕಾರ ದೀರ್ಘಾವಧಿ ವೀಸಾ ಹೊಂದಿದವರನ್ನು ಗಡಿಪಾರು ಮಾಡುವಂತೆ ಆದೇಶ ನೀಡಿಲ್ಲ ಎನ್ನಲಾಗ್ತಿದೆ.
ದೀರ್ಘಾವಧಿ ವೀಸಾ ಪಡೆದ ಜನ!
ಭಟ್ಕಳದ ನವಾಯತ್ ಸಮುದಾಯದಲ್ಲಿ ಪಾಕಿಸ್ತಾನದವರೊಂದಿಗೆ ಅನೇಕರು ಮದುವೆಯಾಗಿದ್ದಾರೆ. ಮದುವೆಯಾದ ಬಳಿಕ ಕೇಂದ್ರ ಸರ್ಕಾರವು ದೀರ್ಘಾವಧಿ ವೀಸಾ ನೀಡುತ್ತದೆ. ಹೀಗಾಗಿ, 91 ಮಂದಿ ಪಾಕಿಸ್ತಾನ ಪ್ರಜೆಗಳು ರಾಜ್ಯದಲ್ಲಿ ನೆಲೆಸಿದ್ದಾರೆ. ಭಟ್ಕಳದಲ್ಲಿ 14, ಕಾರವಾರದಲ್ಲಿ 1 ಸೇರಿದಂತೆ 3 ಮಕ್ಕಳು ದೀರ್ಘಾವಧಿ ವೀಸಾ ಮೂಲಕ ರಾಜ್ಯದಲ್ಲೇ ಇದ್ದಾರೆ.
ಎಂಬಿಬಿಎಸ್ ಓದುತ್ತಿರುವ ಪಾಕಿಸ್ತಾನಿ ಪ್ರಜೆ
ಬೆಂಗಳೂರು, ಕಲ್ಬುರ್ಗಿ, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ನಾನಾ ಕಡೆಯಲ್ಲಿಯೂ ಪಾಕಿಸ್ತಾನಿ ಪ್ರಜೆಗಳಿದ್ದಾರೆ. ದಾವಣಗೆರೆಯಲ್ಲಿ ಓರ್ವ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿರುವ ಪಾಕಿಸ್ತಾನ ಪ್ರಜೆಯೂ ಇದ್ದಾರೆ. ಈ ವಿದ್ಯಾರ್ಥಿಯ ವೀಸಾ ಅವಧಿ ಇನ್ನೂ ಮುಗಿದಿಲ್ಲ. ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ವರನ್ನು ಮಾತ್ರ ಗಡಿಪಾರು ಮಾಡಿರುವ ರಾಜ್ಯ ಸರ್ಕಾರ, ಎಫ್ ಆರ್ ಆರ್ ಒ ಮಾಹಿತಿ ಆಧಾರದ ಮೇಲೆ ಈ ನಾಲ್ವರನ್ನು ಗಡಿಪಾರು ಮಾಡಿದೆ.
